ಡಿ. 8ರ ಒಳಗೆ ಆರೋಪ ಪಟ್ಟಿ ದಾಖಲಿಸಲು ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ನಿರ್ದೇಶ
ಹೊಸದಿಲ್ಲಿ, ಡಿ. 3: ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮಾನವ ಹಕ್ಕು ಹೋರಾಟಗಾರರ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯನ್ನು ತನ್ನ ಮುಂದೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಆರೋಪಿಗಳ ವಿರುದ್ಧ ಆರೋಪಗಳನ್ನು ನೋಡಲು ಬಯಸುತ್ತದೆ ಎಂದು ಹೇಳಿತು ಹಾಗೂ ರಾಜ್ಯ ಪೊಲೀಸರು ಪುಣೆಯ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿದ ಆರೋಪ ಪಟ್ಟಿಯನ್ನು ಡಿಸೆಂಬರ್ 8ರ ಒಳಗೆ ತನ್ನ ಮುಂದೆ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರಿಗೆ ನಿರ್ದೇಶಿಸಿತು. ತನಿಖಾ ವರದಿ ದಾಖಲಿಸಲು ನೀಡಲಾಗಿದ್ದ 90 ದಿನಗಳ ಸಮಯದ ಗಡು ವಿಸ್ತರಿಸಲು ನಿರಾಕರಿಸಿ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಕೂಡ ಒಳಗೊಂಡ ಪೀಠ ವಿಚಾರಣೆ ನಡೆಸಿತು.
ಮನವಿಯ ಮುಂದಿನ ವಿಚಾರಣೆಯನ್ನು ಪೀಠ ಡಿಸೆಂಬರ್ 11ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಬಾಂಬೆ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ಮಾನವ ಹಕ್ಕು ಹೋರಾಟಗಾರರ ವಿರುದ್ಧದ ತನಿಖಾ ವರದಿ ಸಲ್ಲಿಸಲು ಪೊಲೀಸರಿಗೆ ಗಡು ವಿಸ್ತರಣೆಗೆ ಅವಕಾಶ ನೀಡುವ ಕೆಳ ನ್ಯಾಯಾಲಯದ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು.