×
Ad

ವಿಶ್ವಕಪ್ ಆಡಿದ ಹಾರ್ದಿಕ್‌ಗೆ ಕುಟುಂಬ ಸದಸ್ಯರ ಬೆಂಬಲ

Update: 2018-12-03 23:28 IST

ಭುವನೇಶ್ವರ, ಡಿ.3: ಕಳಿಂಗ ಸ್ಟೇಡಿಯಂನಲ್ಲಿ ಭಾರತ ಹಾಗೂ ಬೆಲ್ಜಿಯಂ ನಡುವೆ ರವಿವಾರ ನಡೆದ ಹಾಕಿ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಿದ ಜಲಂಧರ್‌ನ ಕುಟುಂಬವೊಂದು ಕ್ರೀಡೆಯ ಅತ್ಯಂತ ದೊಡ್ಡ ವೇದಿಕೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಕುಟುಂಬದ ಮೂರನೇ ತಲೆಮಾರಿನ ಆಟಗಾರ ಹಾರ್ದಿಕ್ ಸಿಂಗ್ ಪಂದ್ಯ ವೀಕ್ಷಿಸಿ ಕಣ್ತುಂಬಿಕೊಂಡಿತು. ಹಾರ್ದಿಕ್ ಅವರ ಅಜ್ಜ ಹಾಗೂ ತಂದೆ ಹಾಕಿ ಕ್ರೀಡೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಹಾರ್ದಿಕ್ ತಂದೆ ವೀರೇಂದರ್‌ಪ್ರೀತ್ ಸಿಂಗ್ ಅಂತರ್‌ರಾಷ್ಟ್ರೀಯ ಹಾಕಿ ಆಟಗಾರನಾಗಿದ್ದರೆ, ಅವರ ತಾತ ಪ್ರೀತಂ ಸಿಂಗ್ ಭಾರತೀಯ ನೌಕಾಪಡೆಯಲ್ಲಿ ಹಾಕಿ ಕೋಚ್ ಆಗಿದ್ದರು. ಭಾರತದ ಮಾಜಿ ನಾಯಕಿ ರಾಜ್‌ಬೀರ್ ಕೌರ್ ಹಾರ್ದಿಕ್ ಅವರ ಚಿಕ್ಕಮ್ಮ. ಕೌರ್ ಒಲಿಂಪಿಯನ್ ಗುರ್ಮೈನ್ ಸಿಂಗ್‌ರನ್ನು ವಿವಾಹವಾಗಿದ್ದಾರೆ. ಭಾರತದ ಮಾಜಿ ಆಟಗಾರ ಜುಗ್ರಾಜ್ ಸಿಂಗ್ ಹಾರ್ದಿಕ್ ಅವರ ತಂದೆಯ ಚಿಕ್ಕಪ್ಪನಾಗಿದ್ದಾರೆ.

ರವಿವಾರ ಭಾರತ ತಂಡ ಬಲಿಷ್ಠ ಬೆಲ್ಜಿಯಂ ವಿರುದ್ಧ 2-2 ರಿಂದ ರೋಚಕ ಡ್ರಾ ಸಾಧಿಸಿದ ಬೆನ್ನಿಗೇ ಹಾರ್ದಿಕ್‌ರನ್ನು ಆಲಿಂಗಿಸಿಕೊಂಡ ಅವರ ಕುಟುಂಬ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಮೊಹಾಲಿ ಹಾಕಿ ಅಕಾಡಮಿಯಲ್ಲಿ ಪಳಗಿರುವ ಹಾರ್ದಿಕ್ ಸಿಂಗ್ 2013ರಲ್ಲಿ ನಡೆದ ಮೊದಲ ಆವೃತ್ತಿಯ ಹಾಕಿ ಇಂಡಿಯಾ ಲೀಗ್‌ನಲ್ಲಿ ಬಾಲ್ ಬಾಯ್ ಆಗಿದ್ದರು. ಒಂದು ಹಂತದಲ್ಲಿ ಭಾರತೀಯ ಹಾಕಿ ತ್ಯಜಿಸಿ ವಿದೇಶದ ವೃತ್ತಿಪರ ಕ್ಲಬ್‌ಗೆ ಸೇರಬೇಕೆಂದು ಸಿಂಗ್ ಯೋಚಿಸಿದ್ದರು. ಆಗ ಅವರ ತಾಯಿ ಕಮಾಜಿತ್ ಕೌರ್ ಬೆಂಬಲಕ್ಕೆ ನಿಂತರು. 2016ರಲ್ಲಿ ಏಶ್ಯಕಪ್‌ನಲ್ಲಿ ಭಾರತದ ಉಪ ನಾಯಕನ ಸ್ಥಾನ ವಹಿಸಿಕೊಂಡಿದ್ದ ಸಿಂಗ್ ಎಚ್‌ಐಎಲ್‌ನಲ್ಲಿ ಪಂಜಾಬ್ ವಾರಿಯರ್ಸ್ ತಂಡದಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. 20ರ ಹರೆಯದ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಇದೀಗ ವಿಶ್ವಕಪ್ ಕ್ಯಾಪ್ ಧರಿಸಿದ್ದು, ಇದೊಂದು ಅವರ ವಿಶೇಷ ಸಾಧನೆಯಾಗಿದೆ. ಬುಧವಾರ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಆಡುವ ಮೂಲಕ ಸಿಂಗ್ ಹಿರಿಯರ ತಂಡದಲ್ಲಿ ಚೊಚ್ಚಲ ಪಂದ್ಯ ಆಡಿದ್ದಾರೆ. ಸಿಂಗ್ ತಾಯಿ ಕಮಾಜಿತ್ ಕೌರ್ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದು ಮಗನನ್ನು ಹುರಿದುಂಬಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News