ಕರ್ತಾರ್‌ಪುರ ಗಡಿಯಲ್ಲಿ ವಲಸೆ ಕಚೇರಿ ಸ್ಥಾಪಿಸಿದ ಪಾಕಿಸ್ತಾನ

Update: 2018-12-04 14:27 GMT

ಇಸ್ಲಾಮಾಬಾದ್, ಡಿ. 4: ನರೋವಲ್ ಜಿಲ್ಲೆಯಲ್ಲಿ ಭಾರತದ ಜೊತೆಗೆ ಹೊಂದಿರುವ ಗಡಿಯ ಕರ್ತಾರ್‌ಪುರ ವಿಭಾಗದಲ್ಲಿ ಪಾಕಿಸ್ತಾನವು ವಲಸೆ ಕಚೇರಿಯನ್ನು ಹೊಂದಿರುವ ಗಡಿ ಠಾಣೆಯೊಂದನ್ನು ಸ್ಥಾಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ತಾರ್‌ಪುರ ಗುರುದ್ವಾರದ ಸಮೀಪದಲ್ಲಿ ವಲಸೆ ಕಚೇರಿಯಿದೆ ಎಂದು ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ)ಯ ಉಪ ನಿರ್ದೇಶಕ ಮುಫಾಖರ್ ಅದೀಲ್ ‘ಡಾನ್’ ಪತ್ರಿಕೆಗೆ ತಿಳಿಸಿದರು. ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಇಹಲೋಕ ತ್ಯಜಿಸಿದ ಸ್ಥಳದಲ್ಲಿ ಕರ್ತಾರ್‌ಪುರ ಗುರುದ್ವಾರವನ್ನು ನಿರ್ಮಿಸಲಾಗಿದೆ.

ಈ ಗಡಿದಾಟು ಭಯೋತ್ಪಾದಕರು, ಮಾನವ ಕಳ್ಳಸಾಗಾಣಿಕೆದಾರರು ಮತ್ತು ಮಾದಕದ್ರವ್ಯ ಸಾಗಾಟಗಾರರಿಗೆ ಸುಲಭದ ಗುರಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಗಡಿಯ ಎರಡೂ ಭಾಗಗಳಲ್ಲಿ ಬಲವಾದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಲಸೆ ಕಚೇರಿಯ ಸಿಬ್ಬಂದಿಯು ಯಾತ್ರಿಕರ ದಾಖಲೆಗಳನ್ನು ಪರಿಶೀಲಿಸುತ್ತಾರೆ ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ಅವರನ್ನು ಗುರುತಿಸುತ್ತಾರೆ ಎಂದು ಅದೀಲ್ ತಿಳಿಸಿದರು.

ವೀಸಾಗಳನ್ನು ಹೊಂದಿರುವ ಸಿಖ್ ಯಾತ್ರಿಕರಿಗೆ ಕರ್ತಾರ್‌ಪುರ ಪಟ್ಟಣವನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದು. ಆದರೆ, ಪರ್ಮಿಟ್‌ಗಳನ್ನು ಹೊಂದಿರುವ ಯಾತ್ರಿಕರಿಗೆ ಗುರುದ್ವಾರಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News