ಇರಾನ್ ತೈಲ ರಫ್ತು ನಿಲ್ಲಿಸಲು ಅಮೆರಿಕಕ್ಕೆ ಸಾಧ್ಯವಿಲ್ಲ: ಹಸನ್ ರೂಹಾನಿ

Update: 2018-12-04 14:28 GMT

ಜಿನೇವ, ಡಿ. 4: ತೈಲ ರಫ್ತು ಮಾಡುವುದರಿಂದ ಇರಾನನ್ನು ತಡೆಯಲು ಅಮೆರಿಕದಿಂದ ಸಾಧ್ಯವಿಲ್ಲ ಹಾಗೂ ಅರಬ್ ಕೊಲ್ಲಿಯ ಮೂಲಕ ಸಾಗುವ ಇರಾನ್ ತೈಲಕ್ಕೆ ತಡೆಯೊಡ್ಡಿದರೆ, ಅಲ್ಲಿಂದ ಸಾಗುವ ಎಲ್ಲ ತೈಲ ರಫ್ತುಗಳನ್ನು ನಿಲ್ಲಿಸಲಾಗುವುದು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹೊರಗೆ ಬಂದಿರುವ ಅಮೆರಿಕವು, ಆ ದೇಶದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಮರು ಜಾರಿಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಇರಾನ್‌ನ ತೈಲ ರಫ್ತನ್ನು ಶೂನ್ಯಕ್ಕೆ ಇಳಿಸಲು ಹಾಗೂ ಅದರ ಪ್ರಾದೇಶಿಕ ಪ್ರಭಾವವನ್ನು ತಗ್ಗಿಸಲು ಅಮೆರಿಕ ನಿರ್ಧರಿಸಿದೆ.

‘‘ನಾವು ತೈಲ ಮಾರಾಟ ಮಾಡುತ್ತಿದ್ದೇವೆ ಹಾಗೂ ಮುಂದೆಯೂ ತೈಲ ಮಾರಾಟ ಮಾಡುವುದನ್ನು ಮುಂದುವರಿಸುತ್ತೇವೆ ಎನ್ನುವುದನ್ನು ಅಮೆರಿಕ ತಿಳಿದುಕೊಳ್ಳಬೇಕು. ನಮ್ಮ ತೈಲ ರಫ್ತುಗಳನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗುವುದಿಲ್ಲ’’ ಎಂದು ರೂಹಾನಿ ಹೇಳಿದರು.

ಅವರು ಉತ್ತರ ಇರಾನ್‌ನ ನಗರ ಶಹ್ರೌದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಟೆಲಿವಿಶನ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News