ಕಲ್ಲಿದ್ದಲು ಹಗರಣ: ಪ್ರಕಾಶ್ ಇಂಡಸ್ಟ್ರೀಸ್‌ನ 117 ಕೋಟಿ ರೂ. ಆಸ್ತಿ ಜಪ್ತಿ

Update: 2018-12-04 15:24 GMT

ಹೊಸದಿಲ್ಲಿ, ಡಿ.4: ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಇಂಡಸ್ಟ್ರೀಸ್‌ನ 117 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಜಪ್ತಿ ಮಾಡಿದೆ. ಕಂಪೆನಿಯ ವಿರುದ್ಧ ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಆರೋಪಿ ಕಂಪೆನಿಯು ಕಲ್ಲಿದ್ದಲು ಬ್ಲಾಕ್ ಹಂಚಿಕೆ ಬಗ್ಗೆ 2007ರ ನವೆಂಬರ್ 17ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸುಳ್ಳು ಘೋಷಣೆ ಮಾಡಿತ್ತು. ವಾಸ್ತವದಲ್ಲಿ ಈ ಹಂಚಿಕೆಯನ್ನು 2008ರ ಫೆಬ್ರವರಿಯಲ್ಲಿ ಪ್ರಕಾಶ್ ಇಂಡಸ್ಟ್ರೀಸ್ ಲಿ. ಮತ್ತು ಎಸ್‌ಕೆಎಸ್ ಇಸ್ಪಾಟ್ ಪವರ್ ಲಿ.ಗೆ ಜಂಟಿಯಾಗಿ ಹಂಚಿಕೆ ಮಾಡಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ಸುಳ್ಳು ಘೊಷಣೆಯ ಪರಿಣಾಮವಾಗಿ ಪ್ರಕಾಶ್ ಇಂಡಸ್ಟ್ರೀಸ್ ಶೇರುಗಳ ವೌಲ್ಯ ಗಗನಕ್ಕೇರಿತ್ತು. ಈ ಕೃತಕ ಏರಿಕೆ ಲಾಭ ಪಡೆಯಲು ಕಂಪೆನಿಯು ತಲಾ 180 ರೂ. ಬೆಲೆಯ 62,50,000 ಪ್ರಿಫರೆಂಶಲ್ ಶೇರುಗಳನ್ನು ಬಿಡುಗಡೆ ಮಾಡಿ ಅದನ್ನು ಆಯ್ದ ಐದು ಕಂಪೆನಿಗಳಿಗೆ ಮಾರಾಟ ಮಾಡಿತ್ತು.

ಇದರಿಂದ ಶೇರು ಬಂಡವಾಳದ ರೂಪದಲ್ಲಿ ಪ್ರಕಾಶ್ ಇಂಡಸ್ಟ್ರೀಸ್ 118.75 ಕೋಟಿ ರೂ. ಗಳಿಸಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಹೀಗೆ ಗಳಿಸಿದ 118.75 ಕೋಟಿ ರೂ. ಅಕ್ರಮ ಆಸ್ತಿಯಾಗಿದ್ದು ಅಪರಾಧವಾಗಿದೆ. ಹಾಗಾಗಿ ಪಿಎಂಎಲ್‌ಎ ಕಾಯ್ದೆಯಡಿ ಜಪ್ತಿಗೆ ಅರ್ಹವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News