×
Ad

ಉ. ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ: ಸರಕಾರ, ಡಿಜಿಪಿಗೆ ಮಾನವ ಹಕ್ಕು ಆಯೋಗ ನೋಟಿಸ್

Update: 2018-12-04 20:56 IST

ಹೊಸದಿಲ್ಲಿ, ಡಿ.4: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರ ದನಗಳ ಕಳೇಬರ ಪತ್ತೆಯಾದ ವದಂತಿಯ ನಂತರ ನಡೆದ ಹಿಂಸಾಚಾರದಲ್ಲಿ ಪೊಲೀಸ್ ನಿರೀಕ್ಷಕ ಮತ್ತು 20ರ ಹರೆಯದ ಯುವಕ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಂಗಳವಾರ ರಾಜ್ಯ ಸರಕಾರ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. 

ಮೃತರ ಕುಟುಂಬಸ್ಥರು ನ್ಯಾಯಕ್ಕೆ ಆಗ್ರಹಿಸಿದ್ದು, ಘಟನೆ ನಡೆದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿರುವ ಕಾರಣ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಮತ್ತು ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯೋಗವು ಮಾಧ್ಯಮಗಳ ವರದಿಯ ಆಧಾರದಲ್ಲಿ ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಪ್ರಧಾನ ನಿರ್ದೇಶಕರಿಗೆ ನೋಟಿಸ್ ಕಳುಹಿಸಿದೆ.

ಘಟನೆಯ ಬಗ್ಗೆ ಸಂಪೂರ್ಣ ವರದಿ ಮತ್ತು ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ತಿಳಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಆಯೋಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಮುಹಮ್ಮದ್ ಅಖ್ಲಾಕ್ ಗುಂಪು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ನಿರೀಕ್ಷಕ ಸುಬೋಧ್ ಕುಮಾರ್ ಸಿಂಗ್ ರನ್ನು ದುಷ್ಕರ್ಮಿಗಳು ಸೋಮವಾರ ಗುಂಡಿಟ್ಟು ಹತ್ಯೆ ಮಾಡಿದ್ದರು. ಇಡೀ ಪ್ರದೇಶದಲ್ಲಿ ದಾಂಧಲೆ ಎಬ್ಬಿಸಿದ್ದ ಪ್ರತಿಭಟನಾಕಾರರ ತಂಡ ಹಲವು ವಾಹನಗಳನ್ನು ಬೆಂಕಿ ಹಚ್ಚಿತ್ತು. ಘಟನೆಗೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News