ನೀರವ್ ಮೋದಿ, ಚೋಕ್ಸಿಯನ್ನು ಬಂಧಿಸಲು ಕೇಂದ್ರ ಸರಕಾರದ ಬಳಿ ಸಾಕ್ಷಿ ಇತ್ತು: ರಾಹುಲ್ ಗಾಂಧಿ

Update: 2018-12-04 17:21 GMT

ಹೊಸದಿಲ್ಲಿ, ಡಿ. 4: ವಜ್ರೋದ್ಯಮಿ ನೀರವ್ ಮೋದಿ ಹಾಗೂ ಆತನ ಮಾವ ಮೆಹುಲ್ ಚೋಕ್ಸಿ ದೇಶದಿಂದ ಪರಾರಿಯಾಗುವ ತಿಂಗಳುಗಳ ಮುನ್ನ ಬಂಧಿಸಲು ಸರಕಾರದ ಬಳಿ ಸಾಕಷ್ಟು ಪುರಾವೆಗಳು ಇತ್ತು. ಆದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪುತ್ರಿ ಚೋಕ್ಸಿ ಪರ ನ್ಯಾಯವಾದಿಯಾಗಿದ್ದುದರಿಂದ ಹಾಗೆ ಮಾಡಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಅರುಣ್ ಜೇಟ್ಲಿ ಅವರು ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಪರಾರಿಯಾಗಲು ಅವಕಾಶ ನೀಡಿದ 8 ತಿಂಗಳ ಮೊದಲು ಚೋಟಾ ಮೋದಿ ಹಾಗೂ ಚೋಕ್ಸಿ ವಿರುದ್ಧದ ಸಾಮೂಹಿಕ ವಂಚನೆ ಕುರಿತು ಆದಾಯ ತೆರಿಗೆ ಇಲಾಖೆ 10 ಸಾವಿರ ಪುಟಗಳ ವರದಿ ರೂಪಿಸಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರನ್ನು ಬಂಧಿಸಲು ಸರಕಾರದ ಬಳಿ ಪುರಾವೆ ಇತ್ತು. ಆದರೆ, ಹಾಗೆ ಮಾಡಲಿಲ್ಲ. ಯಾಕೆಂದರೆ ಹಣಕಾಸು ಸಚಿವ ಜೇಟ್ಲಿ ಪುತ್ರಿ ಚೋಕ್ಸಿ ಪರ ನ್ಯಾಯವಾದಿ ಎಂದು ಅವರು ಹೇಳಿದರು. ಪಂಜಾಬ್

ನ್ಯಾಶನಲ್ ಬ್ಯಾಂಕ್‌ನ ಹಗರಣ ಬೆಳಕಿಗೆ ಬರುವುದಕ್ಕಿಂತ 8 ತಿಂಗಳ ಹಿಂದೆ ಆದಾಯ ತೆರಿಗೆ ವರದಿ ಕೆಂಪು ನಿಶಾನೆ ತೋರಿಸಿತ್ತು. ಆದರೆ, ವಿವರಗಳನ್ನು ಇತರ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಂಡಿರಲಿಲ್ಲ ಎಂದು ಪ್ರತಿಪಾದಿಸಿದ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ.ಈ ಬಗ್ಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಸರಕಾರ ಹಾಗೂ ಜೇಟ್ಲಿ ಈ ಹಿಂದೆ ಇಂತಹ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News