ಅವಹೇಳನಕಾರಿ ಭಾಷಣ: ವಿಎಚ್‌ಪಿ ಮುಖಂಡ ಮಂಜುನಾಥ್ ಸ್ವಾಮಿ ವಿರುದ್ಧ ಪ್ರಕರಣ ದಾಖಲು

Update: 2018-12-05 11:11 GMT

ಉಡುಪಿ, ಡಿ.5: ಉಡುಪಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಡಿ. 2ರಂದು ಆಯೋಜಿಸಲಾದ ಜನಾಗ್ರಹ ಸಭೆಯಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ವಿಎಚ್‌ಪಿ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ್ ಸ್ವಾಮಿ ಹೇಳಿಕೆಯು ಸಮಾಜದ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಕದಡುವ ಹಾಗೂ ಹಾಳು ಮಾಡುವ ಉದ್ದೇಶವನ್ನು ಹೊಂದಿದ್ದು, ಆದುದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಉಡುಪಿಯ ಅನ್ಸಾರ್ ಅಹ್ಮದ್ ಅವರು ಬುಧವಾರ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಸ್ಲಾಮ್ ಧರ್ಮವೇ ಅಲ್ಲ, ಕುರ್ ಆನ್ ಧರ್ಮ ಗ್ರಂಥವೇ ಅಲ್ಲ, ಇಸ್ಲಾಮ್ ಭಯೋತ್ಪಾದನೆಯನ್ನು ಪ್ರತಿಪಾದಿಸುವ ಧರ್ಮ ಎಂಬಿತ್ಯಾದಿ ಅವಹೇಳನಕಾರಿ ಭಾಷಣ ಮಾಡುವ ಮೂಲಕ ಮಂಜುನಾಥ್ ಸ್ವಾಮಿ ವಿಶ್ವಕ್ಕೆ ಇಸ್ಲಾಮ್ ಧರ್ಮದ ಬಗ್ಗೆ ತಪ್ಪು ಸಂದೇಶ ಹಾಗೂ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅವರ ಈ ಹೇಳಿಕೆ ಇಸ್ಲಾಮ್ ಧರ್ಮಕ್ಕೆ ಮಾಡಿರುವ ಘೋರ ಅವಮಾನವಾಗಿದ್ದು, ಇದರಿಂದ ಮುಸ್ಲಿಮರ ಮನಸ್ಸಿಗೆ ಅತೀವ ನೋವಾಗಿದೆ ಎಂದು ದೂರಲಾಗಿದೆ.

ಮುಸ್ಲಿಮರಿಗೆ ನಮಾಝ್ ಮಾಡಲು ಮಸೀದಿಯ ಅಗತ್ಯವೇ ಇಲ್ಲ. ಅವರು ಶೌಚಾಲಯದಲ್ಲೂ ನಮಾಝ್ ಮಾಡಬಹುದು ಎಂದು ಮಂಜುನಾಥ್ ಸ್ವಾಮಿ ತನ್ನ ಭಾಷಣದಲ್ಲಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರು ನೀಡುವ ಸಂದರ್ಭ ಮಂಜುನಾಥ್ ಸ್ವಾಮಿ ಭಾಷಣ ಮಾಡಿರುವ ಸಿಡಿಯ ಪ್ರತಿಯನ್ನು ಕೂಡ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News