‘ನಮ್ಮ ಅಕ್ಕಿಯನ್ನು ಉಳಿಸಿ’ ಅಭಿಯಾನದ ‘ನೆಲ್’ ಜಯರಾಮನ್ ನಿಧನ

Update: 2018-12-06 15:25 GMT

ಚೆನ್ನೈ, ಡಿ.6: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ‘ನಮ್ಮ ಅಕ್ಕಿಯನ್ನು ಉಳಿಸಿ’ ಅಭಿಯಾನದ ರಾಜ್ಯ ಸಂಯೋಜಕ ‘ನೆಲ್’ ಜಯರಾಮನ್ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ತಿರುವಾರೂರು ಜಿಲ್ಲೆಯ ಕಟ್ಟಿಮೇಡು ಗ್ರಾಮದವರಾದ ಜಯರಾಮನ್, ತನ್ನ ಮಾರ್ಗದರ್ಶಕರಾಗಿದ್ದ ನಮ್ಮಾಳ್ವರ್‌ರಿಂದ ಪ್ರೇರಿತರಾಗಿ ಸ್ಥಳೀಯ ಭತ್ತದ ಬೀಜಗಳ ತಳಿಯನ್ನು ರಕ್ಷಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭತ್ತದ ಬೀಜ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಜಯರಾಮನ್ ‘ನೆಲ್’ ಜಯರಾಮನ್ ಎಂದೇ ಜನಪ್ರಿಯರಾಗಿದ್ದಾರೆ(ನೆಲ್ ಎಂದರೆ ತಮಿಳಿನಲ್ಲಿ ಭತ್ತ ಎಂಬ ಅರ್ಥವಿದೆ).

2006ರಿಂದ ಪ್ರತೀ ವರ್ಷ ಮೇ ತಿಂಗಳಿನಲ್ಲಿ ಭತ್ತದ ಬೀಜದ ಮೇಳ ಆಯೋಜಿಸುತ್ತಿದ್ದ ಜಯರಾಮನ್, ರಾಜ್ಯದ ರೈತರಿಗೆ 2 ಕಿ.ಗ್ರಾಂ ಬೀಜಗಳನ್ನು ಉಚಿತವಾಗಿ ನೀಡುತ್ತಿದ್ದರು. ಸುಮಾರು 37 ಸಾವಿರ ಕೃಷಿಕರನ್ನು ಸಾವಯವ ಕೃಷಿಯಲ್ಲಿ ತೊಡಗುವಂತೆ ಪ್ರೇರೇಪಿಸಿದ್ದ ಜಯರಾಮನ್, ಕೃಷಿ ವಲಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಕೃಷಿಕರಲ್ಲಿ ಅರಿವು ಮೂಡಿಸುತ್ತಿದ್ದರು. ಸಾವಯವ ಕೃಷಿಗೆ ನೀಡಿದ ಕೊಡುಗೆಗಾಗಿ 2011ರಲ್ಲಿ ರಾಜ್ಯ ಪುರಸ್ಕಾರ ಪಡೆದರೆ, 2015ರಲ್ಲಿ ಉತ್ತಮ ತಳಿ ರಕ್ಷಕ ಎಂಬ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು. ನಮ್ಮ ಅಕ್ಕಿ ಉಳಿಸಿ ಅಭಿಯಾನದ ಪ್ರಮುಖ ಸಹಯೋಗಿಯಾಗಿರುವ ಗ್ರಾಹಕ ಆಧಾರಿತ ಸಂಸ್ಥೆ ‘ಕ್ರಿಯೇಟ್’ನ ತರಬೇತಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಥಳೀಯ ಭತ್ತದ ತಳಿಗಳ ಸಂರಕ್ಷಣೆಯ ಕುರಿತ ಹಲವಾರು ಕೃತಿಗಳನ್ನು ಬರೆದಿರುವ ಜಯರಾಮನ್, ಮಾಪ್ಪಿಳೈ ಸಂಬ, ರಾಜಾಮನ್ನಾರ್, ಕವುನಿ, ಮಿಲಗು ಸಂಬ, ಗುಂಡು ಕಾರ್, ಸೇಲಂ ಸಂಬ, ಸಿಗಪ್ಪು ಕುರುವಿಕಾರ್, ಕಲ್ಲಿಮದೈಯಾನ್, ಸಂಬ ಮೋಚನಮ್, ವದನ್ ಸಂಬ, ಪಿಚಾವಾರಿ, ನವರ, ನೀಲನ್ ಸಂಬ ಮುಂತಾದ 174 ಭತ್ತದ ಬೀಜಗಳನ್ನು ಸಂರಕ್ಷಿಸಿ ಉಳಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಯರಾಮನ್ ಚಿಕಿತ್ಸೆಗೆ 5 ಲಕ್ಷ ರೂ.ಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News