ಪೊಲೀಸರಿಗೆ ಧರ್ಮವಿಲ್ಲ: ಉ.ಪ್ರ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಕುಟುಕಿದ ಶಿವಸೇನೆ

Update: 2018-12-06 15:32 GMT

ಮುಂಬೈ,ಡಿ.6: ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಆದಿತ್ಯನಾಥ್ ನಗರಗಳ ಹೆಸರುಗಳನ್ನು ಬದಲಾಯಿಸುವಲ್ಲೇ ವ್ಯಸ್ತವಾಗಿದ್ದಾರೆ ಮತ್ತು ತನ್ನ ರಾಜ್ಯದ ಮುಖ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದೆ. ಯೋಧರು ಮತ್ತು ಪೊಲೀಸರಿಗೆ ಯಾವುದೇ ಧರ್ಮವಿಲ್ಲ. ಹಾಗೆಯೇ ಅಧಿಕಾರದಲ್ಲಿರುವವರು ಕೂಡಾ ಕೇವಲ ತಮ್ಮ ಜವಾಬ್ದಾರಿಗಳ ಮೇಲೆ ಗಮನಹರಿಸಬೇಕು ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರ ಪೊಲೀಸ್ ನಿರೀಕ್ಷಕ ಮತ್ತು 20ರ ಹರೆಯದ ಯುವಕನನ್ನು ಹತ್ಯೆಗೈಯ್ಯಲ್ಪಟ್ಟ ಘಟನೆಯನ್ನು ಉಲ್ಲೇಖಿಸಿ ಆದಿತ್ಯನಾಥ್ ಸರಕಾರದ ವಿರುದ್ಧ ಹರಿಹಾಯ್ದ ಸೇನೆ, ಆದಿತ್ಯನಾಥ್‌ ಆಡಳಿತದಲ್ಲಿ ದಂಗೆಗಳು ಭುಗಿಲೇಳುತ್ತಿವೆ. ದನದ ಮಾಂಸದ ಕಾರಣದಿಂದ ಓರ್ವ ಪೊಲೀಸ್ ಅಧಿಕಾರಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪೊಲೀಸರು ಮತ್ತು ಯೋಧರಿಗೆ ಯಾವುದೇ ಧರ್ಮವಿಲ್ಲ. ಹಾಗೆಯೇ ಅಧಿಕಾರದಲ್ಲಿರುವವರೂ ತಮ್ಮ ಜವಾಬ್ದಾರಿಯ ಮೇಲಷ್ಟೇ ಗಮನಹರಿಸಬೇಕು ಎಂದು ತಿಳಿಸಿದೆ. ರಾಮ ಮಂದಿರ ವಿಷಯವನ್ನೂ ಪ್ರಸ್ತಾಪಿಸಿರುವ ಸೇನೆ, ಮಂದಿರವು ಯಾವಾಗ ನಿರ್ಮಾಣವಾಗಲಿದೆ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ನ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವುದಾಗಿ ಆದಿತ್ಯನಾಥ್ ಚುನಾವಣಾ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಅವರು ತನ್ನದೇ ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News