ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ?

Update: 2018-12-06 15:58 GMT

ಮುಂಬೈ,ಡಿ.6: 2019ರ ಲೋಕಸಭಾ ಚುನಾವಣೆಯಲ್ಲಿ ಪುಣೆ ಕ್ಷೇತ್ರದಿಂದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಕಳೆದ ಜೂನ್‌ನಲ್ಲಿ ಸಮರ್ಥನೆಗಾಗಿ ಸಂಪರ್ಕ ಅಭಿಯಾನದಡಿ ದೀಕ್ಷಿತ್‌ರನ್ನು ಆಕೆಯ ಮುಂಬೈ ನಿವಾಸದಲ್ಲಿ ಭೇಟಿಯಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಆಕೆಗೆ ಮೋದಿ ಸರಕಾರದ ಸಾಧನೆಗಳ ಬಗ್ಗೆ ವಿವರಿಸಿದ್ದರು. ಸದ್ಯ ಪುಣೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಧುರಿ ದೀಕ್ಷಿತ್ ಹೆಸರನ್ನು ಪರಿಗಣಿಸಲಾಗಿದೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಪಕ್ಷವು ಲೋಕಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುತ್ತಿದೆ ಮತ್ತು ಪುಣೆ ಕ್ಷೇತ್ರದಿಂದ ದೀಕ್ಷಿತ್ ಅವರ ಹೆಸರು ಕೇಳಿಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪುಣೆ ಲೋಕಸಭಾಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿತ್ತು. ಬಿಜೆಪಿಯ ಅನಿಲ್ ಶಿರೋಲೆ ಈ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಹೊಸಬರನ್ನು ಕಣಕ್ಕಿಳಿಸುವ ತಂತ್ರವನ್ನು ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಚುನಾವಣೆಯ ವೇಳೆ ಮಾಡಿದ್ದರು. ಆಗ ಪಕ್ಷವು ಅತೀಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಂದೆ ದಿಲ್ಲಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಈ ತಂತ್ರಗಾರಿಕೆ ಫಲ ನೀಡಿತ್ತು ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News