ಆ ಹಂತಕ ಯುವಕರಿಗೆ ನಿಮ್ಮಂತಹ ತಂದೆ ಸಿಗಲಿಲ್ಲ ...

Update: 2018-12-06 15:35 GMT

ಸುಬೋಧ್ ಕುಮಾರ್ ಸಿಂಗ್ ಜಿ ,

ನಾನು ನಿಮಗೆ ಒಂದು ಪತ್ರ ಬರೆಯುತ್ತಿದ್ದೇನೆ. ಈ ಪತ್ರ ನಿಮ್ಮನ್ನೆಂದೂ ತಲುಪದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಈ ಪತ್ರ ನಿಮ್ಮನ್ನು ಕೊಂದ ಆ ಗುಂಪಿನಲ್ಲಿದ್ದ ಯುವಕರನ್ನು ತಲುಪಲಿ ಎಂದು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಆ ಗುಂಪಿನಲ್ಲಿದ್ದ ಯಾವುದಾದರೂ ಒಬ್ಬ ಯುವಕನಿಗೆ ಈ ಪತ್ರ ತಲುಪಿದರೂ ಈ ಪತ್ರ ನಿಮಗೇ ತಲುಪಿದೆ ಎಂದು ನಾನು ಪರಿಗಣಿಸುತ್ತೇನೆ. ನಿಮ್ಮ ಹೆಸರಿಗೆ ನಾನು ಬರೆದ ಈ ಪತ್ರ ನಿಮ್ಮ ಹಂತಕರಿಗೆ ಏಕೆ ತಲುಪಬೇಕು ? ಏಕೆಂದರೆ ಆ ಹುಡುಗರಿಗೇ ಸುಬೋಧ್ ಕುಮಾರ್ ಸಿಂಗ್ ರಂತಹ ತಂದೆ ಸಿಗಲಿಲ್ಲ. ನಿಮ್ಮಂತಹ ತಂದೆ ಆ ಹುಡುಗರಿಗೂ ಸಿಕ್ಕಿದ್ದರೆ ಅವರು ಅಭಿಷೇಕ್ ಸಿಂಗ್ ( ನಿಮ್ಮ ಪುತ್ರ) ರಂತೆ ಇರುತ್ತಿದ್ದರು. ಅವರು ದ್ವೇಷ ಪ್ರಚೋದಿಸುವ ಭಾವನೆಗಳನ್ನು ಉದ್ರೇಕಿಸುವ ಉನ್ಮಾದಕ್ಕೆ ಒಳಗಾಗಿ ಹತ್ಯೆ ಮಾಡಲು ಹೋಗುತ್ತಿರಲಿಲ್ಲ. ಅದಕ್ಕಾಗಿ ನಾನು ಈಗ ನಿಮ್ಮ ಹೆಸರಿಗೆ ಈ ಪತ್ರ ಬರೆಯುತ್ತಿದ್ದೇನೆ. 

ಈಗ ನಯಬಾಸ್ ಮತ್ತು ಚಿಂಗ್ರಾವತಿ ( ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪಿಗಳ ಊರುಗಳು ) ಗ್ರಾಮಗಳ ಹುಡುಗರ ತಂದೆಯಂದಿರು ಅಸಹಾಯಕರಾಗಿ , ಏಕಾಂಗಿಗಳಾಗಿ ನೋಡುತ್ತಿರುವ ದೃಶ್ಯ ನನ್ನ ಕಣ್ಣೆದುರು ಬರುತ್ತಿದೆ. ಯಾವ ತಂದೆಯಾದರೂ ತನ್ನ ಮಗನ ಹೆಸರು ಹತ್ಯೆ ಆರೋಪಿಗಳ ಪಟ್ಟಿಯಲ್ಲಿ ಬರಬೇಕೆಂದು ಬಯಸುತ್ತಾನೆಯೇ ?  ರಾತ್ರೋರಾತ್ರಿ ಹತ್ಯೆ ಆರೋಪಿಗಳಾಗಿ ಬದಲಾದ ತಮ್ಮ ಮಕ್ಕಳ ಬಗ್ಗೆ ಆ ಹೆತ್ತವರಿಗೆ ಇಂತಹ ದುಸ್ವಪ್ನಗಳು ಬೀಳುತ್ತಿರಬಹುದು ? ಇದನ್ನು ಯೋಚಿಸುವಾಗಲೇ ನನ್ನ ಮೈ ನಡುಗುತ್ತಿದೆ. ಹಿಂದೂ ಮುಸ್ಲಿಂ ದ್ವೇಷದ ಈ ರಾಜಕೀಯ ಅವರ ಬದುಕನ್ನು ಚಿಂದಿ ಮಾಡಿ ಹಾಕಿದೆ. ನಾನು ಯಾವಾಗಲೂ ನನ್ನ ಭಾಷಣಗಳಲ್ಲಿ ಹೇಳುತ್ತಿರುತ್ತೇನೆ. ಒಬ್ಬ ಪೆಹಲೂ ಖಾನ್ ನ ಹತ್ಯೆಗಾಗಿ ಹಿಂದೂ ಮನೆಗಳಲ್ಲಿ ಐವತ್ತು ಹಂತಕರನ್ನು ಸೃಷ್ಟಿಸಲಾಗುತ್ತಿದೆ. ಹಾಗಾಗಿ ಇದನ್ನು ಓದುವವರಿಗೆ ಪೆಹಲೂ ಖಾನ್ ಗಾಗಿ ಸಹಾನುಭೂತಿ ಇಲ್ಲದಿದ್ದರೂ ಪರವಾಗಿಲ್ಲ , ಆದರೆ ತಮ್ಮ ಮನಸ್ಸಿನಿಂದ ಸಹಾನೂಭೂತಿಯ ಭಾವನೆಯನ್ನು ಸಂಪೂರ್ಣ ತೆಗೆದುಹಾಕಿಬಿಡಬೇಡಿ. ಅದು ಐವತ್ತು ಮನೆಗಳ ಹಿಂದೂ ಹುಡುಗರನ್ನು ಹಂತಕರಾಗದಂತೆ ತಡೆಯಲು ಬಹಳ ಅಗತ್ಯವಿದೆ . ಅಖ್ಲಾಕ್ ಹತ್ಯೆಯ ಆರೋಪಿಗಳು ನ್ಯಾಯಾಲಯದಿಂದ ಬಚಾವಾದರೂ ಅವರಿಗೆ ನೆಮ್ಮದಿ ಎಂಬುದಿಲ್ಲ. ತಮ್ಮ ಊರಿಗೆ ಯಾವಾಗ ಪೊಲೀಸರು ಬಂದರೂ ಯಾರೋ ನಮ್ಮ ಬಗ್ಗೆ ಹೇಳಿಯೇ ಅವರನ್ನು ಕಳಿಸಿದ್ದಾರೆ ಎಂದು ಆ ಹತ್ಯೆಯಲ್ಲಿ ಶಾಮೀಲಾದವರ ಎದೆ ನಡುಗುವುದು ಖಚಿತ. 

ನಯಬಾಸ್ ಹಾಗು ಚಿಂಗ್ರಾವತಿಯ ಯುವಕರು ಮತ್ತು ಅವರ ಹೆತ್ತವರು ಈ ಅಪರಾಧಿ ಭಾವನೆಯನ್ನು ಸಂಭಾಳಿಸಲಾರರು. ಅವರಿಗೆ ಇನ್ನೂ ಪ್ರತಿ ಇಟ್ಟಿಗೆಯ ತುಂಡಿನ ಮೇಲೂ ತಮ್ಮ ಮಕ್ಕಳ ಬೆರಳಚ್ಚು ಕಾಣಲು ಶುರುವಾಗುತ್ತದೆ. ಈ ಇಟ್ಟಿಗೆಯ ತುಂಡಿನ ಸಾಕ್ಷ್ಯದ ಮೇಲೆ ಪೊಲೀಸರು ನನ್ನ ಮಗನವರೆಗೆ ತಲುಪುವರೇ ಎಂಬ ಭಯ ಅವರನ್ನು ಸದಾ ಕಾಡಲಿದೆ. ಕೆಲವು ದಿನ ತನ್ನ ಮಗನನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ ಎಂದು ಅವರೀಗ ತಮ್ಮ ಸಂಬಂಧಿಕರಿಗೆ ಫೋನ್ ಮಾಡುತ್ತಿರಬಹುದು. ಅದೇ ಸಂದರ್ಭದಲ್ಲಿ ವಕೀಲರಲ್ಲಿ ಕಾಡಿ ಬೇಡುತ್ತಿರಬಹುದು. ಯಾವುದಾದರೂ ಮಂತ್ರ ಪಠಿಸಿ ನನ್ನ ಮಗನನ್ನು ಉಳಿಸಿಕೊಳ್ಳಿ ಎಂದು ಪುರೋಹಿತರಿಗೆ ದಾನ ನೀಡುತ್ತಿರಬಹುದು. ಒಟ್ಟಾರೆ ಅವರ ಜೀವನ ಸರ್ವನಾಶವಾಗಿ ಹೋಗಿದೆ. ಇನ್ನು ರಾಜಕೀಯ ಅವರ ಮಕ್ಕಳನ್ನು ಒಮ್ಮೆಗೆ ಬಚಾವ್ ಮಾಡಿದರೂ ಮತ್ತೆ ಅದರ ಬೆಲೆಯನ್ನು ಅವರಿಂದ ವಸೂಲಿ ಮಾಡಿಯೇ ಬಿಡುತ್ತದೆ. ಅವರಿಂದ ಇನ್ನಷ್ಟು ಕೊಲೆಗಳನ್ನು ಈ ರಾಜಕೀಯ ಮಾಡಿಸುತ್ತದೆ. ಈ ಗ್ರಾಮಗಳ ಯುವಕರು ಕೋಮುವಾದದ ಬಲೆಗೆ ಬಿದ್ದು ಇನ್ನು ಮುಂದಿನ ಸುದೀರ್ಘ ಕಾಲಕ್ಕೆ ಸಂಕಷ್ಟಕ್ಕೆ ಸಿಲುಕಿಯಾಗಿದೆ. ಹಾಗಾಗಿಯೇ ಅವರು ಈ ಪತ್ರ ಓದಲಿ ಎಂದು ಇದನ್ನು ನಿಮಗೆ ಬರೆಯುತ್ತಿದ್ದೇನೆ. 

ಅಭಿಷೇಕ್ ( ನಿಮ್ಮ ಪುತ್ರ ) ಜೊತೆ ಮಾತನಾಡುವಾಗ ಆತ ನಿಮ್ಮನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾನೆ ಎಂದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಎಷ್ಟೆಂದರೆ ನಿಮ್ಮನ್ನು ಹೀಗೆ ಕಳಕೊಂಡ ಮೇಲೂ ನೀವು ನೀಡಿದ ತರಬೇತಿಯನ್ನು ತನ್ನ ಎದೆಗವುಚಿಕೊಂಡು ಕಾಪಾಡಿಕೊಂಡಿದ್ದಾರೆ. ನಾನು ನಿಮ್ಮನ್ನು ಭೇಟಿಯಾಗಿಲ್ಲ. ಆದರೆ ಈಗ ನಿಮ್ಮನ್ನು ನೋಡುತ್ತಿದ್ದೇನೆ. ಅಭಿಷೇಕ್ ರ ಮಾತುಗಳ ಮೂಲಕ ನಾನು ಮಾತ್ರವಲ್ಲ ಲಕ್ಷಾಂತರ ಮಂದಿ ನಿಮ್ಮನ್ನು ನೋಡುತ್ತಿದ್ದಾರೆ. ದಿನವಿಡೀ ಖಡಕ್ ಆಗಿ ಇರಬೇಕಾದ ತನ್ನ ಉದ್ಯೋಗವನ್ನು ನಿರ್ವಹಿಸಿ ಮನೆಗೆ ಬರುವಾಗ ಮಕ್ಕಳಿಗೆ ಚಾಕೊಲೇಟ್ , ಆಟಿಕೆಗಳನ್ನು ತಂದು ಸಮವಸ್ತ್ರ ಕಳಚಿಟ್ಟು ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಮಾತಾಡಿ ಅವರಿಗೆ ಒಳ್ಳೆಯ ವಿಷಯಗಳನ್ನು ಹೇಳಿಕೊಟ್ಟು , ಅವರನ್ನು ಉತ್ತಮ ನಾಗರೀಕರಾಗಿ ರೂಪಿಸುವ ಆ ಪೊಲೀಸ್ ಅಧಿಕಾರಿಯ ಹಾಗೆ. 

" ನನ್ನ ತಂದೆಗಿದ್ದಿದ್ದು ಒಂದೇ ಕನಸು. ನೀವು ಜೀವನದಲ್ಲಿ ಏನು ಬೇಕಾದರೂ ಸಾಧಿಸಿ ಅಥವಾ ಬಿಡಿ, ಆದರೆ ಒಬ್ಬ ಉತ್ತಮ ನಾಗರೀಕನಾಗಿ " ಎಂದು ಹೇಳಿದ್ದು ನಿಮ್ಮ ಮಗ ಅಭಿಷೇಕ್. ತನ್ನ ಪ್ರೀತಿಯ ತಂದೆಯನ್ನು ಕಳಕೊಂಡ ಬಳಿಕವೂ ಒಬ್ಬ ಮಗ ಇಷ್ಟು ತಾರ್ಕಿಕವಾಗಿ ಮಾತನಾಡುತ್ತಾನೆ ಎಂಬುದನ್ನು ಆತನ ಮಾತುಗಳನ್ನು ಕೇಳುವವರಿಗೂ ನಂಬಲೂ ಸಾಧ್ಯವಾಗುತ್ತಿಲ್ಲ. ನಿಮ್ಮ ಮಾತನ್ನು ಕೇಳದ ಆ ಅಮಾನುಷ ಗುಂಪಿಗೂ ನೀವು ಇದನ್ನೇ ಹೇಳಲು ಹೋಗಿದ್ದೀರೇನೋ ಎಂದು ನನಗನಿಸುತ್ತಿದೆ. ನಿಮ್ಮ ಎದೆಯಲ್ಲೇ ಉಳಿದುಬಿಟ್ಟ ಆ ಮಾತುಗಳು ಈಗ ಅಭಿಷೇಕ್ ಮೂಲಕ ಪ್ರಕಟವಾಗುತ್ತಿದೆ. " ಮಾಬ್ ಲಿಂಚಿಂಗ್ ನ ಸಂಸ್ಕೃತಿಯಿಂದ ಯಾವುದೇ ಲಾಭವಿಲ್ಲ . ಭಾರತದಲ್ಲಿ ನಾವು ಪರಸ್ಪರರನ್ನು ಹೊಡೆದು ಕೊಲ್ಲುವ ದಿನಗಳು ಬಾರದಿರಲಿ. ಹಾಗಾದರೆ ಮತ್ತೆ ಪಾಕಿಸ್ತಾನ, ಚೀನಾ ಅಥವಾ ಬೇರೆ ಯಾರೂ ಏನೂ ಮಾಡಬೇಕಾಗಿಯೇ ಇಲ್ಲ. ಇವತ್ತು ನನ್ನ ತಂದೆ ಹತ್ಯೆಯಾಗಿದ್ದಾರೆ. ನಾಳೆ ಯಾವುದಾದರೂ ಐಜಿ ( ಇನ್ಸ್ ಪೆಕ್ಟರ್ ಜನರಲ್ ) ಯನ್ನು ಈ ಜನರು ಕೊಂದುಬಿಟ್ಟರು ಎಂದು ಸುದ್ದಿ ಬರಬಹುದು , ಮತ್ತೆ ಯಾವುದಾದರೂ ಮಂತ್ರಿ ಇದೇ ರೀತಿ ಕೊಲೆಯಾದ ಮಾಹಿತಿ ಬರಬಹುದು. ಈ ಮಾಬ್ ಲಿಂಚಿಂಗ್ ಸಂಸ್ಕೃತಿ ಇದೇ ರೀತಿ ಮುಂದುವರಿಯಬೇಕೆ ? " ಎಂದು ಅಭಿಷೇಕ್ ಹೇಳಿದ. 

ಸುಬೋಧ್ ಕುಮಾರ್ ಸಿಂಗ್ ಜಿ, ನೀವು ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಇಲಾಖೆಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬಹುದು. ಸಂಘಟನೆಯ ಹೆಸರು ಹೇಳಲು ಹಿಂಜರಿಯುತ್ತಿದ್ದ ನಿಮ್ಮ ಇಲಾಖೆಯ ಹಿರಿಯಧಿಕಾರಿಯ ಹೇಡಿತನವನ್ನೂ ನೀವು ನೋಡಿರಬಹುದು. ಅವರ ಆ ಸಮವಸ್ತ್ರ ಯಾವುದಾದರೂ ದುರ್ಬಲನನ್ನು ಸಿಲುಕಿಸಿ ಹಾಕಲು ಅಥವಾ ಎರಡು ಲಾಠಿಯೇಟು ಬಿಗಿದು ಅವನಿಂದ ಬೇಕಾದನ್ನು ಹೇಳಿಸಲು ಮಾತ್ರ ಬಳಕೆಯಾಗಿರಬಹುದು. ಇಂತಹ ಪೊಲೀಸರ ಬಳಿ ಉಳಿದಿರುವುದು ಆ ಸಮವಸ್ತ್ರ ಮಾತ್ರ. ಅವರಲ್ಲಿ ನಿಷ್ಠೆ ಮತ್ತು ನಾಚಿಕೆ ಇರುವುದಿಲ್ಲ. ಪೋಲೀಸರ ಭಯ ನಿಜವಾಗಿ ಪೊಲೀಸರಿಂದಲೇ ಬರುವುದಲ್ಲ, ಅವರ ಯಜಮಾನರು ಅವರಿಗೆ ಕೊಟ್ಟು ಕಳಿಸಿದ್ದು ಅದು. ನಿಮ್ಮ ಕೊಲೆಯಾಗಿ ಮೂರು ದಿನ ಕಳೆಯಿತು.ಆದರೆ ಈ ಪೊಲೀಸರು ಒಟ್ಟು 27 ಆರೋಪಿಗಳಲ್ಲಿ ಕೇವಲ ಮೂವರನ್ನು ಹಿಡಿದಿದ್ದಾರೆ. ಉತ್ತರ ಪ್ರದೇಶ ಪೊಲೀಸರು ತಮ್ಮ ಠಾಣೆಗಳ ಹೊರಗೆ ' ನಾವು ಸಮವಸ್ತ್ರದಲ್ಲಿ ಮಾತ್ರ ಪೊಲೀಸರು, ನಿಷ್ಠೆಯಿಂದ ನಾವು ಪೊಲೀಸರಲ್ಲ' ಎಂದು  ಒಂದು ನೊಟೀಸ್ ಅಂಟಿಸಬೇಕು. 

ನಮ್ಮ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಈ ಪೊಲೀಸರನ್ನು ಸೃಷ್ಟಿಸಿದೆ. ನಮ್ಮ ವ್ಯವಸ್ಥೆ ನಿರ್ದೋಷಿಯೇ ? ಈ ವ್ಯವಸ್ಥೆ ಪೊಲೀಸರ ಎಲ್ಲ ಕೆಡುಕುಗಳನ್ನು ಸ್ವೀಕರಿಸಿ ಸಹಿಸಿಕೊಂಡಿದೆ. ಆ ಕೆಡುಕುಗಳಲ್ಲಿ ಶಾಮೀಲಾಗಿದೆ. ಇಲ್ಲಿ ಉತ್ತಮ ಅಧಿಕಾರಿಗಳಿಗೆ ಎಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ ? ಪೊಲೀಸರೆಂದ ಕೂಡಲೇ ಎಷ್ಟು ವಿಭಿನ್ನವಾಗಿ ಬಿಡುತ್ತಾರೆ ? ಈ ಪೊಲೀಸ್ ವ್ಯವಸ್ಥೆಯಲ್ಲಿ ಅವರು ತಮ್ಮ ಕುಟುಂಬದಿಂದ ಸಂಪೂರ್ಣ ವಿಭಿನ್ನರಾಗಿಬಿಡುತ್ತಾರೆ. ಈಗ ನನಗೆ ಅರಿವಾಗುತ್ತಿದೆ. ಇದೇ ಪೊಲೀಸ್ ವ್ಯವಸ್ಥೆಯಲ್ಲಿರುವ ಕೆಲವರು ಮನೆಗೆ ಮರಳಿದ ಮೇಲೆ ಸುಬೋಧ್ ಕುಮಾರ್ ಸಿಂಗ್ ರಂತೆಯೂ ಇರುತ್ತಾರೆ. 

ಆದರೂ ನನಗೆ ನಿಮ್ಮ ಪೊಲೀಸರಿಂದ ಯಾವುದೇ ನಿರೀಕ್ಷೆಗಳಿಲ್ಲ. ನಿಮ್ಮ ಅಧಿಕಾರಿಗಳಿಂದಲೂ ಯಾವುದೇ ನಿರೀಕ್ಷೆ ಇಲ್ಲ. ಈ ಅಧಿಕಾರಿಗಳಲ್ಲಿ ವೃತ್ತಿ ನಿಷ್ಠೆ ಏನೇನೂ ಉಳಿದಿಲ್ಲದಿದ್ದರೂ ಈಶ್ವರ ಅವರ ಕೀರ್ತಿ ಕಾಪಾಡಲಿ. ಅದೂ ಇಲ್ಲದಿದ್ದರೆ ಅವರಲ್ಲಿ ಬದುಕಲು ಕಾರಣಗಳೇ ಇರುವುದಿಲ್ಲ. ನಿಮ್ಮ ಸಹೋದ್ಯೋಗಿ ಪೊಲೀಸರು ಬಹಳ ಬೇಗ ಇದನ್ನು ಮರೆತುಬಿಡುತ್ತಾರೆ. ತಮ್ಮದೆಲ್ಲವೂ ಸರಿಯಾಗಿ ಮುಂದುವರಿಯುತ್ತಿರಲಿ  ಎಂಬ ದೂರದೃಷ್ಟಿಯಲ್ಲಿ ಯಾವುದಾದರೂ ನೆಪ ಹುಡುಕಿ ತೀರ್ಥ ಯಾತ್ರೆಗೆ ಹೋಗಿಬಿಡುತ್ತಾರೆ. ಇನ್ನು ಅವರು ಕರ್ತವ್ಯದಲ್ಲಿದ್ದರೂ ನಿಮ್ಮ ಹಂತಕರನ್ನು ಹಿಡಿಯುವುದು ದೂರದ ಮಾತು. ಅಲ್ಲಿ ಅವರು ಗೋಸಾಗಾಟಗಾರರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೊರಡಿಸಲಾದ ಪತ್ರಿಕಾ ಪ್ರಕಟಣೆಯಂತೆ ಕೆಲಸ ಮಾಡುತ್ತಿರುತ್ತಾರೆ. ಮುಖ್ಯಮಂತ್ರಿಗಳು ನೀಡಿದ ಪ್ರಕಟಣೆಯಲ್ಲಿ ಸುಬೋಧ್ ಕುಮಾರ್ ಸಿಂಗ್ ಅವರ ಹಂತಕರನ್ನು 24 ಗಂಟೆಗಳೊಳಗೆ ಬಂಧಿಸಬೇಕು ಎಂದೇನೂ ಹೇಳಿಲ್ಲ. ಪೊಲೀಸರ ನೌಕರಿಯಲ್ಲಿ ಇದೆಲ್ಲಾ ಆಗುತ್ತಿರುತ್ತದೆ ಎಂದು ಅವರೂ ತಿಳಿದುಕೊಂಡಿದ್ದಾರೆ. 

ಹೋಗಲಿ ಬಿಡಿ. ನಿಮ್ಮ ಪೊಲೀಸ್ ಇಲಾಖೆ ತನ್ನ ಬಗ್ಗೆ ತಾನು ಕಾಳಜಿ ವಹಿಸಿಕೊಳ್ಳುತ್ತದೆ. ಆದರೆ ನಾವು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ. ವಿಷಾದವೇನೆಂದರೆ, ನಾವೊಬ್ಬ ಒಳ್ಳೆಯ ತಂದೆಯನ್ನು ಆತನ ಹತ್ಯೆಯ ಬಳಿಕವೇ ಗುರುತಿಸಿದೆವು. ನೀವು ಭಾರತದಲ್ಲಿರುವ ತಂದೆಯಂದಿರ ಪೈಕಿ ಅಪವಾದ. ಇಲ್ಲಿ ಹೆಚ್ಚಿನ ತಂದೆಯಂದಿರು ವಿಚಾರಗಳನ್ನು ಜಡತ್ವ ಹಾಗು ಸಂಕೀರ್ಣತೆಯಿಂದ ಪೋಷಿಸುವವರು. ಅವರು ಯಾವಾಗಲೂ ತನ್ನ ನಿಯಂತ್ರಣದಲ್ಲಿರುವ ಪುತ್ರನನ್ನು ಬೆಳೆಸುತ್ತಾರೆ. ಆದರೆ ನೀವು ಅಭಿಷೇಕ್ ನನ್ನ ಉತ್ತಮ ನಾಗರೀಕನಾಗಿ ಬೆಳೆಸಬಯಸಿದ್ದಿರಿ. ಅವನು ಹಾಗೆಯೆ ಉತ್ತಮ ನಾಗರೀಕನಾಗಿದ್ದಾನೆ. ತನ್ನ ಪ್ರೀತಿಯ ತಂದೆಯನ್ನು ಕಳಕೊಂಡರೂ ಆತ ಸಂವಿಧಾನದ ಮಿತಿಯೊಳಗೆ ನಿಂತು ಮಾತಾಡುತ್ತಿದ್ದಾನೆ. ಪೊಲೀಸ್ ನೌಕರಿ ನಿಮಗೆ ನೀಡಿದ ಗೌರವಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚ್ ಸಮ್ಮನವನ್ನು ನಿಮ್ಮ ಮಗ ಅಭಿಷೇಕ್ ನಿಮಗೆ ನೀಡಿದ್ದಾನೆ. ಅಭಿಷೇಕ್ ಮಾತುಗಳಿಂದ ನೀವು ಇವತ್ತು ಮನೆಮನೆಗಳಲ್ಲಿ ಜೀವಂತವಾಗಿದ್ದೀರಿ.  

ಅಭಿಷೇಕ್ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ತನ್ನ ಸಂಘರ್ಷಗಳ ಮೂಲಕ ವಕೀಲಿ ವೃತ್ತಿಯಲ್ಲಿ ಅತ್ಯುನ್ನತ ಸ್ಥಾನ ತಲುಪಲಿ. ಎಲ್ಲ ಸಂಕುಚಿತವಾದಗಳು ಹಾಗು ಜಡತ್ವಗಳಿಂದ ಆತ ದೂರವಿರಲಿ. ಆತನಂತಹ ಸಂತುಲಿತ ಹಾಗು ತಾರ್ಕಿಕ ಯುವಕ ಒಂದು ದಿನ ನ್ಯಾಯಾಧೀಶನೂ ಆಗಲಿ ಎಂದು ನಾನು ಹಾರೈಸುತ್ತೇನೆ. ನೀವು ಭಾರತಕ್ಕೆ ಒಬ್ಬ ಒಳ್ಳೆಯ ನಾಗರೀಕನನ್ನು ಕೊಟ್ಟಿದ್ದೀರಿ. ಸುಬೋಧ್ ಕುಮಾರ್ ಸಿಂಗ್ ಅವರೇ , ನಿಮಗೆ ನನ್ನ ಸಲಾಂ. 

ರವೀಶ್ ಕುಮಾರ್ 

ಕನ್ನಡಕ್ಕೆ : ಉಮರ್ ಬಶೀರ್ ಅಹ್ಮದ್  

ಕೃಪೆ : khabar.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News