ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಅದನ್ನು ನಿಬಾಯಿಸುವವರು ಕಾಪಾಡುತ್ತಾರೆ: ಸಿಜೆಐ ಗೊಗೊಯಿ

Update: 2018-12-06 15:36 GMT

ಹೊಸದಿಲ್ಲಿ,ಡಿ.6: ಪೂರ್ವ ಭಾರತೀಯ ಮುಖ್ಯ ನ್ಯಾಯಾಧೀಶರ ಮೇಲೆ ಬಾಹ್ಯ ಶಕ್ತಿಗಳು ಪ್ರಭಾವ ಬೀರಿದ್ದವು ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಹಾಕಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿಜೆಐ ರಂಜನ್ ಗೊಗೊಯಿ, ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಅದನ್ನು ನಿಬಾಯಿಸುವವರು ಕಾಪಾಡುತ್ತಾರೆಯೇ ಹೊರತು ಸುದ್ದಿ ಪತ್ರಿಕೆಗಳ ವರದಿಗಳಲ್ಲ ಎಂದು ಗುರುವಾರ ತಿಳಿಸಿದ್ದಾರೆ. ಭಾರತೀಯ ಮುಖ್ಯ ನ್ಯಾಯಾಧೀಶರ ಮುಂದೆ ಹಾಜರಾದ, ಸಾರ್ವಜನಿಕ ಹಿತಾಸಕ್ತಿ ದಾವೆಯ ಪರ ವಕೀಲರು ಈ ಪ್ರಕರಣವನ್ನು ಶೀಘ್ರವಾಗಿ ಆಲಿಸುವಂತೆ ಮನವಿ ಮಾಡಿದರು. ಈ ಮೇಲ್ಮನವಿಯಲ್ಲಿ ಕೆಲದಿನಗಳ ಹಿಂದೆ ನಿವೃತ್ತಿ ಹೊಂದಿರುವ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು ಮಾಧ್ಯಮದ ಮುಂದೆ ನೀಡಿರುವ ಹೇಳಿಕೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಸಿಜೆಐ, ಹಾಗಾದರೆ ನೀವು ಇಂಥ ಪಿಐಎಲ್‌ಅನ್ನು ದಾಖಲಿಸುತ್ತೀರಿ ಮತ್ತು ಅದನ್ನು ಶೀಘ್ರ ಆಲಿಸಬೇಕೆಂದು ಬಯಸುತ್ತೀರಿ. ಏನಿದು? ನೀವು ನಿಮ್ಮ ಕೆಲಸ ಮಾಡಬೇಕು ಮತ್ತು ನಾವು ನಮ್ಮದನ್ನು. ಅಷ್ಟೇ ಎಂದು ಕಿಡಿಕಾರಿದ್ದಾರೆ. ನನ್ನ ಉದ್ದೇಶ ಕೇವಲ ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕಾಪಾಡುವುದಷ್ಟೇ ಆಗಿದೆ ಎಂದು ವಕೀಲರು ತಿಳಿಸಿದಾಗ ಪ್ರತಿಕ್ರಿಯಿಸಿದ ಸಿಜೆಐ ಗೊಗೊಯಿ, ಆ ಬಗ್ಗೆ ನೀವು ಅನಗತ್ಯವಾಗಿ ಆತಂಕ ಪಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಅದನ್ನು ನಿಬಾಯಿಸುವವರು ಕಾಪಾಡುತ್ತಾರೆ. ಅದಕ್ಕೆ ಪತ್ರಿಕಾ ವರದಿಗಳಿಂದ ಪರಿಣಾಮವಾಗುವುದಿಲ್ಲ ಎಂದು ಗೊಗೊಯಿ ತಿಳಿಸಿದ್ದಾರೆ. ಕಳೆದ ವಾರ ನಿವೃತ್ತರಾದ ನ್ಯಾಯಾಧೀಶ ಕುರಿಯನ್ ಜೋಸೆಫ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ, ಮಾಜಿ ಸಿಜೆಐ ದೀಪಕ್ ಮಿಶ್ರಾ ಅವರ ಮೇಲೆ ಬಾಹ್ಯ ಶಕ್ತಿಗಳು ಪ್ರಭಾವ ಬೀರಿದ್ದಂತೆ ಕಂಡುಬರುತ್ತಿತ್ತು ಮತ್ತು ಅವರು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೋ ಎಂದನಿಸಿತ್ತು ಎಂದು ತಿಳಿಸಿದ್ದರು. ಈ ವರ್ಷದ ಜನವರಿಯಲ್ಲಿ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಬಹಿರಂಗ ಮಾಧ್ಯಮಗೋಷ್ಟಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯ ನಾಲ್ವರು ಹಿರಿಯ ನ್ಯಾಯಾಧೀಶರ ಪೈಕಿ ಕುರಿಯನ್ ಜೋಸೆಫ್ ಮತ್ತು ರಂಜನ್ ಗೊಗೊಯಿ ಕೂಡಾ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News