ಡಾಲರ್‌ನೆದುರು ಮತ್ತೆ ಕುಸಿತಕ್ಕೆ ನಾಂದಿ ಹಾಡಿದ ರೂಪಾಯಿ

Update: 2018-12-06 15:52 GMT

ಮುಂಬೈ,ಡಿ.6: ಅಮೆರಿಕದ ಡಾಲರ್‌ನೆದುರು 74 ರೂ.ವರೆಗೂ ಕುಸಿದು,ಬಳಿಕ ಡಾಲರ್‌ನ ದುರ್ಬಲತೆ ಮತ್ತು ಜಾಗತಿಕ ಕಚ್ಚಾ ತೈಲಗಳ ಬೆಲೆಗಳಲ್ಲಿ ಇಳಿಕೆಯಿಂದಾಗಿ ಚೇತರಿಸಿಕೊಂಡು ಕೆಲವು ವಾರಗಳಿಂದ 69-70ರ ನಡುವೆ ಹೊಯ್ದಾಡುತ್ತಿದ್ದ ರೂಪಾಯಿ ಗುರುವಾರ ಒಂದು ಹಂತದಲ್ಲಿ 71ರವರೆಗೆ ಕುಸಿತವನ್ನು ಕಂಡಿತ್ತು. ಅಮೆರಿಕನ್ ಡಾಲರ್ ಬಲಗೊಂಡಿದ್ದು ಮತ್ತು ದೇಶೀಯ ಶೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತ ಇದಕ್ಕೆ ಕಾರಣವಾಗಿತ್ತು. ಸಂಜೆಯ ವೇಳೆಗೆ ಡಾಲರ್‌ನೆದುರು ರೂಪಾಯಿ ಚೇತರಿಸಿಕೊಂಡಿದ್ದು,70.89ನ್ನು ತಲುಪಿದೆ. ಬುಧವಾರ 70.46ರಲ್ಲಿ ಮುಕ್ತಾಯಗೊಂಡಿದ್ದ ರೂಪಾಯಿ ಗುರುವಾರ ಒಂದು ಹಂತದಲ್ಲಿ 54 ಪೈಸೆಗಳ ನಷ್ಟವನ್ನು ದಾಖಲಿಸಿತ್ತಾದರೂ ನಂತರ ಈ ನಷ್ಟ 43 ಪೈಸೆಗಳಿಗೆ ಇಳಿಕೆಯಾಗಿದೆ.

ವಿದೇಶಿ ಕರೆನ್ಸಿಗಳ ಎದುರು ಡಾಲರ್‌ನ ಮೌಲ್ಯವರ್ಧನೆ ಮತ್ತು ಶೇರು ಮಾರುಕಟ್ಟೆಗಳಲ್ಲಿ ವಿದೇಶಿ ಹಣದ ಹೊರಹರಿವು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ ಎನ್ನುವುದು ವಿದೇಶಿ ವಿನಿಮಯ ವ್ಯಾಪಾರಿಗಳ ಅಭಿಪ್ರಾಯ.

ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ 70.82ರಲ್ಲಿ ಆರಂಭಗೊಂಡ ರೂಪಾಯಿ ಬಳಿಕ 71ರವರೆಗೂ ಕುಸಿದಿತ್ತು.

 ಅತ್ತ ಬಿಎಸ್‌ಇ ಸೂಚ್ಯಂಕ ಬಿಎಸ್‌ಇ ಗುರುವಾರ 572.28 ಅಂಶ ಪತನಗೊಂಡು 35312.13ರಲ್ಲಿ ಮುಕ್ತಾಯಗೊಂಡಿದ್ದರೆ,ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 181.75 ಅಂಶಗಳ ನಷ್ಟದೊಡನೆ 10601.15ರಲ್ಲಿ ಅಂತ್ಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News