ಹೈಬ್ರಿಡ್ ಕ್ಲೌಡ್ ಅಳವಡಿಕೆಯಲ್ಲಿ ಭಾರತವು ವಿಶ್ವದ ಅಗ್ರರಾಷ್ಟ್ರವಾಗಲಿದೆ: ನ್ಯೂಟಾನಿಕ್ಸ್

Update: 2018-12-06 16:04 GMT

ಬೆಂಗಳೂರು,ಡಿ.6: ಹೈಬ್ರಿಡ್ ಕ್ಲೌಡ್ ವ್ಯವಸ್ಥೆಯನ್ನು ಅಳವಡಿಕೆ ಮತ್ತು ಬಳಕೆಯಲ್ಲಿ ಜಾಗತಿಕ ಮತ್ತು ಏಷ್ಯಾ ಫೆಸಿಪಿಕ್ ಹಾಗೂ ಜಪಾನ್(ಎಪಿಜೆ) ವಲಯಗಳ ಪ್ರತಿದ್ವಂದ್ವಿಗಳನ್ನು ಹಿಂದಿಕ್ಕಲು ಭಾರತವು ಸಜ್ಜಾಗಿದ್ದು,2020ರ ವೇಳೆಗೆ ಶೇ.43ರಷ್ಟು ಭಾರತೀಯ ಉದ್ಯಮಗಳು ಹೈಬ್ರಿಡ್ ಕ್ಲೌಡ್ ತಂತ್ರಜ್ಞಾನವನ್ನು ಬಳಸಲಿವೆ ಮತ್ತು ಭಾರತವು ಅಗ್ರರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ಪ್ರಮುಖ ಉದ್ಯಮ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ನ್ಯೂಟಾನಿಕ್ಸ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ವ್ಯಾನ್ಸನ್ ಬೌರ್ನ್ ಸಂಕಲಿಸಿರುವ ‘ನ್ಯೂಟಾನಿಕ್ಸ್ ಎಂಟರ್‌ಪೈಸ್ ಕ್ಲೌಡ್ ಇಂಡೆಕ್ಸ್’ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಹೈಬ್ರಿಡ್ ಕ್ಲೌಡ್ ಕಂಪ್ಯೂಟಿಂಗ್‌ನ ಪ್ರಮಾಣ ಈಗಿನ ಶೇ.13ರಿಂದ ಶೇ.43ರಷ್ಟಾಗುವ ಮೂಲಕ ಮೂರು ಪಟ್ಟಿಗೂ ಅಧಿಕ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ಬೆಟ್ಟುಮಾಡಿದೆ.

ಈ ತ್ವರಿತ ಅಳವಡಿಕೆಯಿಂದ ಅರ್ಥವ್ಯವಸ್ಥೆಗೆ ಹೆಚ್ಚಿನ ಉತ್ಪಾದಕತೆ ಮತ್ತು ದಕ್ಷತೆಯ ಲಾಭಗಳು ದೊರೆಯುವುದರಿಂದ ಭಾರತದ ಆರ್ಥಿಕತೆಯು ಹೆಚ್ಚು ಸದೃಢಗೊಳ್ಳಲು ನೆರವಾಗಲಿದೆ. ಡಿಜಿಟಲ್ ರೂಪಾಂತರವು ವೇಗವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಷ್ಯಾ ತನ್ನ ಚಿತ್ರಣವನ್ನು ಮರುವ್ಯಾಖ್ಯಾನಿಸಿಕೊಳ್ಳುತ್ತಿರುವದರಿಂದ ಸಂಪೂರ್ಣ ಸಂಪರ್ಕಿತ ಆರ್ಥಿಕತೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಜ್ಜಾಗಿರುವ ದೇಶಗಳು ಗಣನೀಯ ಲಾಭವನ್ನು ಪಡೆಯಲಿವೆ ಎಂದು ವರದಿಯು ತಿಳಿಸಿದೆ. ಇದು ಭಾರತೀಯ ಉದ್ಯಮಗಳಿಗೆ ಮತ್ತು ಭಾರತಕ್ಕೆ ಅತ್ಯಂತ ಒಳ್ಳೆಯ ಸುದ್ದಿಯಾಗಿದೆ ಎಂದು ಹೇಳಿದ ನ್ಯೂಟಾನಿಕ್ಸ್‌ನ ಭಾರತ ಕಾರ್ಯಾಚರಣೆಗಳ ಎಂ.ಡಿ. ಸಂಕಲ್ಪ ಸಕ್ಸೇನಾ ಅವರು,ಡಿಜಿಟಲ್ ಪರಿವರ್ತನೆಯು ಪ್ರಾದೇಶಿಕ ಮತ್ತು ಜಾಗತಿಕ ಚಿತ್ರಣಗಳನ್ನು ಮರು ವ್ಯಾಖ್ಯಾನಿಸುತ್ತಿದೆ. ಬಿಲಿಯಗಟ್ಟಲೆ ಜನರು,ಸ್ಥಳಗಳು ಮತ್ತು ವಸ್ತುಗಳು ಅಂತರ್ಜಾಲದೊಂದಿಗೆ ಸಂಪರ್ಕಿತಗೊಂಡಿರುವುದರಿಂದ ಮತ್ತು ಹೆಚ್ಚೆಚ್ಚು ಉದ್ಯಮಗಳು ತಮ್ಮ ಸಿಸ್ಟಮ್‌ಗಳು,ಸಾಫ್ಟ್‌ವೇರ್‌ಗಳು ಮತ್ತು ಪ್ರಕ್ರಿಯೆಗಳನ್ನು ಕ್ಲೌಡ್ ಪ್ರೊವೈಡರ್‌ಗಳಿಗೆ ಸ್ಥಳಾಂತರಿಸುತ್ತಿರುವದರಿಂದ ಈ ಎಲ್ಲ ಅಂಶಗಳನ್ನು ಜೋಡಿಸುವ,ಸಂವಹನ ನಡೆಸುವ ಮತ್ತು ನಿರ್ವಹಿಸುವ ಅಗತ್ಯವು ಹೊಸ ದೃಷ್ಟಿಕೋನವನ್ನು ಪಡೆಯುವ ಅಗತ್ಯವಿದೆ. ಹೈಬ್ರಿಡ್ ಮೂಲಸೌಕರ್ಯವು ಈ ಎಲ್ಲ ಕೆಲಸಗಳನ್ನು ಮಾಡುತ್ತದೆ ಮತ್ತು ಕ್ಲೌಡ್‌ನ ಸಂಪೂರ್ಣ ಲಾಭ ಪಡೆದುಕೊಳ್ಳಲು ಅವಕಾಶವನ್ನು ತೆರೆಯುತ್ತದೆ ಎಂದರು.

ಖಾಸಗಿ ಕ್ಲೌಡ್ ಬಳಕೆಯಲ್ಲಿ ಇಟಲಿ(ಶೇ.49),ಜರ್ಮನಿ(ಶೇ.43) ಮತ್ತು ಫ್ರಾನ್ಸ್(ಶೇ.39) ಭಾರತಕ್ಕಿಂತ ಮುಂದಿವೆ ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News