ಪ್ರತಿಕೂಲ ಸಾಕ್ಷಿಯಿಂದ ತನಿಖೆಗೆ ಅಡ್ಡಿ: ಸಿಬಿಐ

Update: 2018-12-06 17:45 GMT

ಮುಂಬೈ, ಡಿ.6: ಸೊಹ್ರಾಬುದ್ದೀನ್ ಶೇಖ್ ಮತ್ತು ತುಲಸೀರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದ ಅಂತಿಮ ವಿಚಾರಣೆ ಬುಧವಾರ ನಡೆದಿದ್ದು, ಈ ಸಂದರ್ಭ ಹೇಳಿಕೆ ನೀಡಿದ ಸಿಬಿಐ, ಪ್ರತಿಕೂಲ ಸಾಕ್ಷಿಯಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣದ ಅಂತಿಮ ವಾದ ಪ್ರತಿವಾದ ಸೋಮವಾರ ಆರಂಭಗೊಂಡಿದ್ದು 22 ಆರೋಪಿಗಳ ವಕೀಲರು ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಜೆ ಶರ್ಮರೆದುರು ತಮ್ಮ ವಾದ ಮಂಡಿಸಿದರು. ಬಹುತೇಕ ಆರೋಪಿಗಳು ಗುಜರಾತ್ ಮತ್ತು ರಾಜಸ್ತಾನದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. 2005ರಲ್ಲಿ ಗುಜರಾತ್ ಪೊಲೀಸರು ನಡೆಸಿದ್ದ ನಕಲಿ ಎನ್‌ಕೌಂಟರ್‌ನಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರೆಂದು ಶಂಕಿಸಲಾದ ಸೊಹ್ರಾಬುದ್ದೀನ್ ಶೇಖ್ ಮತ್ತು ಆತನ ಪತ್ನಿ ಕೌಸರ್ ಬಿ ಹತರಾಗಿದ್ದರು. ಈ ಅವಳಿ ಹತ್ಯೆಯ ಪ್ರತ್ಯಕ್ಷದರ್ಶಿಯಾಗಿದ್ದ ಶೇಖ್‌ನ ಸಹವರ್ತಿ ಪ್ರಜಾಪತಿಯನ್ನು ಮತ್ತೊಂದು ನಕಲಿ ಎನ್‌ಕೌಂಟರ್‌ನಲ್ಲಿ ಗುಜರಾತ್ ಮತ್ತು ರಾಜಸ್ತಾನದ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಗುಜರಾತ್ ಸಿಐಡಿಗೆ ವಹಿಸಲಾಗಿತ್ತು. ಬಳಿಕ 2010ರಲ್ಲಿ ಸುಪ್ರೀಂಕೋರ್ಟ್ ಸಿಬಿಐಗೆ ವರ್ಗಾಯಿಸಿತ್ತು. ಬುಧವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಸಿಬಿಐ ವಕೀಲ ಬಿಪಿ ರಾಜು, ಐದು ವರ್ಷದ ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಮತ್ತು ಸಾಕ್ಷಿಗಳ ವಿಚಾರಣೆಯನ್ನು 12 ವರ್ಷದ ಬಳಿಕ ನಡೆಸಿರುವುದರಿಂದ ತನಿಖೆಯಲ್ಲಿ ಕೆಲವು ಲೋಪಗಳಾಗಿವೆ ಎಂದು ಹೇಳಿದರು. ವಿಚಾರಣೆ ಸಂದರ್ಭ ಕೆಲವು ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ಹೇಳಿರುವುದರಿಂದ ತನಿಖೆಗೆ ತೊಂದರೆಯಾಗಿದೆ ಎಂದು ಅವರು ತಿಳಿಸಿದರು.

  ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ನ್ಯಾಯಾಧೀಶ ಶರ್ಮ, ನಾನು ಸಿಐಡಿ ಅಥವಾ ಸಿಬಿಐಯನ್ನು ದೂಷಿಸುವುದಿಲ್ಲ. ಈ ಪ್ರಕರಣದಲ್ಲಿ ಹೇಳಿಕೆಗಳಿವೆ ಮತ್ತು ಸಾಕ್ಷಿಗಳಿವೆ. ಅವರು ನ್ಯಾಯಾಲಯಕ್ಕೆ ಬಂದು ಬೇರೇನೋ ಹೇಳಿದರೆ ಅದು ನಿಮ್ಮ ತಪ್ಪಲ್ಲ. ನಿಮ್ಮ ಕೆಲಸವನ್ನು ನೀವು ಮಾಡಿದ್ದೀರಿ ಎಂದು ಹೇಳಿದರು. ಈ ಪ್ರಕರಣದಲ್ಲಿ ಆರೋಪಿಗಳೆಂದು ಸಿಬಿಐ ಹೆಸರಿಸಿದ್ದ 38 ಮಂದಿಯಲ್ಲಿ, ಬಿಜೆಪಿ ಅಧ್ಯಕ್ಷ (ಆಗ ಗುಜರಾತ್‌ನ ಗೃಹ ಸಚಿವರಾಗಿದ್ದರು) ಅಮಿತ್ ಶಾ, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News