ಡಿ.12: ಸರಕಾರಿ ಎನ್‌ಪಿಎಸ್ ನೌಕರರಿಂದ ಬೆಳಗಾವಿ ಚಲೋ

Update: 2018-12-07 12:04 GMT

ಪುತ್ತೂರು, ಡಿ.7: ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ದ.ಕ. ಜಿಲ್ಲಾ ಹಾಗೂ ತಾಲೂಕು ಸಮಿತಿ ಘಟಕಗಳ ಸಹಯೋಗದಲ್ಲಿ ಡಿ.12ರಂದು ‘ಬೆಳಗಾವಿ ಚಲೋ’ ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇಬ್ರಾಹೀಂ ಎಂ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಮಂದಿ ಭಾಗವಹಿಸಲಿದ್ದು, ದ.ಕ. ಜಿಲ್ಲೆಯಿಂದ 3 ಸಾವಿರ ಮಂದಿ ಭಾಗವಹಿಸಲಿದ್ದಾರೆ. ನೌಕರರ ಇಳಿವಯಸ್ಸಿನಲ್ಲಿ ಸಾಮಾಜಿಕ ಭದ್ರತೆಗಾಗಿ ಹಿಂದೆ ಸರಕಾರ ಅನುಸರಿಸುತ್ತಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವಂತೆ ಹಾಗೂ ಷೇರು ಮಾರುಕಟ್ಟೆ ಆಧಾರಿತ, ವಂತಿಗೆ ಆಧಾರಿತ ಅನಿಶ್ಚಿತ ಹೊಸ ಪಿಂಚಣಿ ಯೋಜನೆಯನ್ನು ರುದ್ದುಗೊಳಿಸುವಂತೆ ಆಗ್ರಹಿಸಲಾಗುವುದು. ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಈಗಾಗಲೇ ರಾಜ್ಯಾದ್ಯಂತ 200 ಕಾರ್ಯಾಗಾರಗಳು, ತಾಲೂಕು, ಜಿಲ್ಲಾ ಹಾಗೂ ನಾಲ್ಕು ವಿಭಾಗೀಯ ಸಮಾವೇಶಗಳು, ಮೂರು ಬಾರಿ ದಿಲ್ಲಿ ಸಂಸತ್ ಚಲೋ ಮತ್ತು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೇವು’ ಎಂಬ ಹೋರಾಟ ನಡೆಸಿದ್ದೇವೆ. ಇದೀಗ ಎಲ್ಲಾ ಎನ್‌ಪಿಎಸ್ ನೌಕರರನ್ನು ಸಂಘಟಿಸಿ ಬೆಳಗಾವಿ ಚಲೋ, ಬ್ರಹತ್ ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ವಿದ್ಯಾಧರ ರೈ, ಜಿಲ್ಲಾ ಪ್ರತಿನಿಧಿಗಳಾದ ರಾಘವೇಂದ್ರ ಗೌಡ, ಚಂದ್ರು ನಾಯ್ಕಾ, ತಾಲೂಕು ಪ್ರತಿನಿಧಿ ಮಲ್ಲಿಕ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News