ಸಂಕುಚಿತ ಮನೋಭಾವ ತೊರೆದರೆ ಮಾನವೀಯ ಮೌಲ್ಯ ಬೆಳೆಯಲು ಸಾಧ್ಯ: ಬಲ್ಲೋಟು ಸ್ವಾಮೀಜಿ

Update: 2018-12-07 14:01 GMT

ಉಡುಪಿ, ಡಿ.7: ಮನುಷ್ಯ ತನ್ನಲ್ಲಿರುವ ಸಂಕುಚಿತ ಮನೋಭಾವವನ್ನು ತೊರೆದರೆ ಮಾನವೀಯ ಮೌಲ್ಯಗಳು ತನ್ನಿಂದ ತಾನೆ ಬೆಳೆಯುತ್ತದೆ. ಇಲ್ಲದಿದ್ದರೆ ಸಂಕುಚಿತ ಮನೋಭಾವದಿಂದ ಮನುಷ್ಯ ಸ್ವಾರ್ಥಿಯಾಗಿ ಬೆಳೆಯುತ್ತಾನೆ ಎಂದು ಕಾರ್ಕಳ ಹೊಸ್ಮಾರು ಬಲ್ಲೋಟು ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ಅಭಿಯಾನದ ಅಂಗವಾಗಿ ಉಡುಪಿ ಜಾಮೀಯ ಮಸೀದಿ ಬಳಿಯ ಎಕ್ಸ್ ಪೋ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಮಾನವೀಯ ಮೌಲ್ಯಗಳ ಕುರಿತ ವಸ್ತು ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಇಸ್ಲಾಮ್ ಧರ್ಮವನ್ನು ಭಯೋತ್ಪಾದಕ ಧರ್ಮ ಎಂಬುದಾಗಿ ಆರೋಪಿಸುವುದು ಸರಿಯಲ್ಲ. ಕುರ್ ಆನ್ ಮತ್ತು ಪ್ರವಾದಿಗಳ ಕೃತಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಚಿಂತನೆಗಳಿವೆ. ಕೃತಿಗಳು ಓದುವುದರಿಂದ ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ. ಪ್ರವಾದಿಯವರ ಚಿಂತನೆ ಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಧ್ಯಾತ್ಮಿಕ ಚಿಂತನೆಗಳು ಮನ ಮತ್ತು ಮನೆಯಲ್ಲಿ ಇಟ್ಟುಕೊಂಡು ಸಮಾಜ ದಲ್ಲಿ ಸಹೋದರತೆಯನ್ನು ಬೆಳೆಸಬೇಕು. ಇಂದು ಯುದ್ಧಗಳ ಅವಶ್ಯಕತೆ ಇಲ್ಲ. ಶಿಕ್ಷಣ ಸೇರಿದಂತೆ ಒಳಿತಿನ ವಿಚಾರಗಳ ಕಡೆಗೆ ಚಿಂತನೆ ಮಾಡಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವನ್ನು ಉದ್ಘಾಟಿಸಿದರು. ಬಂಟರ ಸಂಘ ಬ್ರಹ್ಮಾವರ ವಲಯದ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದಾಸ ಬನ್ನಂಜೆ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಮುಖ್ಯ ಅತಿಥಿಗಳಾಗಿದ್ದರು.

ಅಧ್ಯಕ್ಷತೆಯನ್ನು ಕರ್ನಾಟಕ ಸದ್ಭವನಾ ಮಂಚ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಹಿಸಿದ್ದರು. ಆದಿಲ್ ಹೂಡೆ ಕುರಾನ್ ಪಠಿಸಿದರು. ಇದ್ರೀಸ್ ಹೂಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News