ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಕೇದರನಾಥ ಸಿನೆಮಾಕ್ಕೆ ನಿಷೇಧ

Update: 2018-12-07 14:09 GMT

ಡೆಹ್ರಾಡೂನ್,ಡಿ.7: ಕೇಸರಿ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಹಿಂದಿ ಸಿನೆಮಾ ಕೇದರನಾಥ್‌ಗೆ ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ನಿಷೇಧ ಹೇರಲಾಗಿದೆ ಎಂದು ಹಿರಿಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಶೋಕ್ ಕುಮಾರ್ ತಿಳಿಸಿದ್ದಾರೆ. ಕೇದರನಾಥದಲ್ಲಿ ವಿನಾಶ ಸೃಷ್ಟಿಸಿದ್ದ 2013ರ ಮಹಾಮಳೆ ಮತ್ತು ನೆರೆಯ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾದಲ್ಲಿ ಮುಸ್ಲಿಂ ಯುವಕ ಮತ್ತು ಕೇದರನಾಥಕ್ಕೆ ಯಾತ್ರೆಗೆ ಬಂದ ಹಿಂದು ಯುವತಿಯ ನಡುವಿನ ಪ್ರೇಮಕತೆಯನ್ನು ತೋರಿಸಲಾಗಿದೆ. ಈ ಸಿನೆಮಾದಲ್ಲಿ ಯುವಕನ ಪಾತ್ರ ಮುಸ್ಲಿಂ ಹಾಗೂ ಯುವತಿಯ ಪಾತ್ರ ಹಿಂದು ಆಗಿರುವುದನ್ನು ವಿರೋಧಿಸಿ ಈ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದವು. ಶುಕ್ರವಾರ ಸಿನೆಮಾ ಬಿಡುಗಡೆಯಾಗುತ್ತಿದ್ದಂತೆ ಚಿತ್ರ ನಿರ್ಮಾಪಕರ ಪುತ್ಥಳಿಗೆ ಬೆಂಕಿ ಹಚ್ಚಿ ಆಕ್ರೋಶ ಪ್ರದರ್ಶಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸದ್ಯ ಉತ್ತರಾಖಂಡದ ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಉದಮ್ ಸಿಂಗ್ ನಗರ, ಪೌರಿ, ತೆಹ್ರಿ ಮತ್ತು ಅಲ್ಮೊರದಲ್ಲಿ ಕೇದರನಾಥ ಸಿನೆಮಾ ಪ್ರದರ್ಶನದ ಮೇಲೆ ನಿಷೇಧ ಹೇರಲಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News