ಸಾಸ್ತಾನ ಟೋಲ್ ಗೇಟ್ ವಿರುದ್ಧ ತೀವ್ರಗೊಂಡ ಪ್ರತಿಭಟನೆ

Update: 2018-12-07 14:16 GMT

ಕೋಟ, ಡಿ.7: ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಟೋಲ್ ವಿರುದ್ಧ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಸಾಸ್ತಾನ ಟೋಲ್ ಕೇಂದ್ರದ ಬಳಿ ಶುಕ್ರವಾರ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸದಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು

ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಹೆದ್ದಾರಿ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿ ಮತ್ತು ಸ್ಥಳೀಯ ವಾಹನಗಳಿಗೆ ಟೋಲ್ ವಿರೋಧಿಸಿ ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಟೋಲ್ ಮುಕ್ತ ಆಗಬೇಕು. ಟೋಲ್ ವಿಚಾರದಲ್ಲಿ ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ. ನ್ಯಾಯ ಪರವಾದ ಫಲಿತಾಂಶ ಬರುವ ವರೆಗೆ ಹೋರಾಟ ಕೈಬಿಡಬಾರದು ಎಂದರು.

ಬಾಳೆಕುದ್ರು ಮಠದ ಶ್ರೀನೃರಸಿಂಹಾಶ್ರಮ ಸ್ವಾಮೀಜಿ ಮಾತನಾಡಿ, ಇದೇ ರೀತಿ ಮುಂದುವರೆದರೆ ಮನೆಯಿಂದ ಹೊರಗಡೆ ಕಾಲಿಡಬೇಕಾದರೂ ಟೋಲ್ ಪಾವತಿಸುವ ಪರಿಸ್ಥಿತಿ ಬರಬಹುದು. ನಮ್ಮ ಭೂಮಿಯನ್ನು ಪಡೆದು ಕೊಂಡು ನಮ್ಮಿಂದಲೇ ಟೋಲ್ ಸಂಗ್ರಹಿಸುವ ಮೂಲಕ ಶೋಷಣೆ ಮಾಡ ಲಾಗುತ್ತಿದೆ. ಇದರ ವಿರುದ್ಧ ಜಾತಿ ಧರ್ಮ ಮರೆತು ನ್ಯಾಯಯುತ ಹೋರಾಟ ಮಾಡಬೇಕು ಎಂದು ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ ಮಾತ ನಾಡಿ, 2013ರಲ್ಲಿ ಆರಂಭಗೊಂಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು 2018ರ ಆದರೂ ಪೂರ್ಣಗೊಂಡಿಲ್ಲ. 2019ರ ಮಾರ್ಚ್ ವೇಳೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸ್ಥಳೀಯ ವಾಹನಗಳಿಗೆ ಟೋಲ್ ತೆಗೆದುಕೊಳ್ಳಬಾರದೆಂದು ನಿರಂತರ ಪ್ರಯತ್ನ ಮಾಡು ತ್ತಿದ್ದು ನವಯುಗ ಕಂಪೆನಿ ಅಧಿಕಾರಿಗಳು ಅದಕ್ಕೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು

ಧರಣಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿ ವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸಾಸ್ತಾನ ಮಸೀದಿಯ ಮೌಲಾನ ಇರ್ಫಾನ್ ಆಲಂ, ಸಾಸ್ತಾನ ಚರ್ಚ್‌ನ ಧರ್ಮಗುರು ಫಾ.ಜಾನ್ ವಾಲ್ಟರ್ ಮೆಂಡೊನ್ಸಾ, ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿ ಯೇಷನ್ನ ಅಧ್ಯಕ್ಷ ರಮೇಶ್ ಕೋಟ್ಯಾನ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕ್ ಕುಂದರ್, ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮೊದಲಾದ ವರು ಉಪಸ್ಥಿತರಿದ್ದರು.

ಧರಣಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಈ ಪ್ರಯುಕ್ತ ಕೋಟ, ಸಾಸ್ತಾನ ಪರಿಸರದ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಆಚರಿಸಲಾಯಿತು. ಧರಣಿ ಹಿನ್ನೆಲೆಯಲ್ಲಿ ಟೋಲ್ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಕರ ನಿರಾಕರಣೆ ಚಳವಳಿ

ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯಿತಿ ನೀಡದಿದ್ದರೆ ನಾಳೆಯಿಂದ ಅಹಿಂಸಾತ್ಮಕ ಕರ ನಿರಾಕರಣೆ ಚಳವಳಿಯನ್ನು ಹಮ್ಮಿಕೊಳ್ಳಲಾಗು ವುದು. ಇದಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಬೆಂಬಲ ನೀಡಲಿದ್ದಾರೆ. ಆದುದರಿಂದ ಶಾಂತಿಯುತವಾಗಿ ನಡೆಯುವ ಹೋರಾಟದ ಸಂದರ್ಭದಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಮಾತುಕತೆ ವಿಫಲ: ಟೋಲ್‌ಗೆ ಮುತ್ತಿಗೆ ಯತ್ನ

ಧರಣಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಎಸ್ಪಿ ಲಕ್ಷ್ಮಣ ನಿಂಬರ್ಗಿ ಶುಕ್ರವಾರ ಮಧ್ಯಾಹ್ನ ವೇಳೆ ಉಡುಪಿ ಪ್ರವಾಸಿ ಮಂದಿರ ದಲ್ಲಿ ಕರೆದ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಸದರು, ಶಾಸಕರು ಮತ್ತು ನವಯುಗ ಕಂಪೆನಿ ಅಧಿಕಾರಿಗಳ ಸಭೆಯು ಯಾವುದೇ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ವಿಫಲವಾಯಿತು.

20 ಕಿ.ಮೀ. ವ್ಯಾಪ್ತಿಯೊಳಗಿನ ವಾಹನಗಳಿಗೆ ಟೋಲ್ ವಿನಾಯಿತಿ ನೀಡ ಬೇಕೆಂಬ ಸಮಿತಿಯ ಬೇಡಿಕೆಯನ್ನು ನಿರಾಕರಿಸಿದ ಕಂಪೆನಿಯು ಐದು ಕಿ.ಮೀ. ಒಳಗೆ ಕೇವಲ ಖಾಸಗಿ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ನೀಡು ವುದಾಗಿ ತಿಳಿಸಿತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಮಿತಿಯವರು, ಟ್ಯಾಕ್ಸಿ ವಾಹನಗಳಿಗೂ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.

ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಸಂಜೆ ಧರಣಿನಿರತರು ಸಾಸ್ತಾನ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ದರು. ಈ ವೇಳೆ ಪೊಲೀಸರು ಸಂಸದರು, ಶಾಸಕರು ಸೇರಿದಂತೆ ಧರಣಿ ನಿರತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News