ಮಂಗಳೂರು: ಮರಳು ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2018-12-07 15:22 GMT

ಮಂಗಳೂರು, ಡಿ.7: ದ.ಕ. ಜಿಲ್ಲೆಯ ಜನತೆಗೆ ಕಾಡುತ್ತಿರುವ ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸಲು ರಾಜ್ಯ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಚಳಿಗಾಲದ ಅಧಿವೇಶನ ಮುಗಿದೊಡನೆ ಬಿಜೆಪಿ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.

ರಾಜ್ಯ ಸರಕಾರ ಮತ್ತು ದ.ಕ. ಜಿಲ್ಲಾಡಳಿತವು ಮರಳುಗಾರಿಕೆಗೆ ಅನುಮತಿ ನಿರಾಕರಿಸಿ ಮೀನಮೇಷ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಮತ್ತು ಕಂದಾಯ ಇಲಾಖೆಯ ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರಿಗೆ ನೀಡಲು ನಿರ್ಲಕ್ಷ ವಹಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ಮಂಡಲದ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಡಳಿತವು ಮರಳುಗಾರಿಕೆಗೆ ಅವಕಾಶ ನೀಡದ ಕಾರಣ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಯಾವುದೇ ನಿರ್ಮಾಣ ಕೆಲಸಗಳು ಆಗುತ್ತಿಲ್ಲ. ಹಲವು ಬಾರಿ ಸರಕಾರ, ಕಂದಾಯ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಮರಳುಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪ ಮಾಡಲಾಗುವುದು. ಬಳಿಕ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಆ ಬಳಿಕವೂ ಪರಿಹಾರ ಕಾಣದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವೇದವ್ಯಾಸ ಕಾಮತ್ ಹೇಳಿದರು.

ಪ್ರಾಪರ್ಟಿ ಕಾರ್ಡ್ ಸಮಸ್ಯೆ

ಕಂದಾಯ ಇಲಾಖೆಯಲ್ಲಿ ಜನರಿಗೆ ಅಗತ್ಯವಾಗಿರುವ ಯಾವೊಂದು ಕೆಲಸವೂ ಆಗುತ್ತಿಲ್ಲ. ಇದೀಗ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿದ್ದು, ಜನಸಾಮಾನ್ಯರಿಗೆ ಇನ್ನಷ್ಟು ಸಮಸ್ಯೆಯಾಗಿದೆ. ಸದ್ಯ ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಂಡವರು ಕೇವಲ ಶೇ. 30ರಷ್ಟು ಜನ ಮಾತ್ರ. ಇನ್ನೂ ಶೇ. 70ರಷ್ಟು ಮಂದಿ ಕಾರ್ಡ್ ಮಾಡಿಸಿಕೊಳ್ಳಲು ಬಾಕಿ ಇದ್ದಾರೆ. ಆದರೆ ಕಾರ್ಡ್ ಮಾಡಿಸಿಕೊಳ್ಳುವ ಅವಧಿಯನ್ನು ಜಿಲ್ಲಾಡಳಿತವು ಒಂದು ತಿಂಗಳ ಕಾಲ ವಿಸ್ತರಿಸಿದೆ. ಈ ಅವಧಿಯಲ್ಲಿ ಇಷ್ಟೊಂದು ಮಂದಿಗೆ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ಮುಡಾ ಸಭೆ ನಡೆಯದೆ 3 ತಿಂಗಳು

ಪ್ರತಿ ತಿಂಗಳು ಮುಡಾ ಸಭೆ ನಡೆಯಬೇಕು. ಆದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯದೆ ಮೂರು ತಿಂಗಳಾಯಿತು. ಈ ಬಗ್ಗೆ ಪ್ರಶ್ನಿಸಿದರೆ ವಸತಿ ಸಚಿವರಿಗೆ ಬೇರೆ ಮೀಟಿಂಗ್‌ಗಳಿರುವುದರಿಂದ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರಾಪರ್ಟಿ ಕಾರ್ಡ್ ಅವಧಿ ವಿಸ್ತರಿಸಿದರೂ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾರ್ಡ್‌ರಹಿತರಿಗೆ ಆಸ್ತಿ ನೋಂದಣಿ ಮಾಡಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ತಿಳಿಯುವುದಿಲ್ಲ ಎಂದು ವೇದವ್ಯಾಸ ಕಾಮತ್ ನುಡಿದರು.

ಮರಳು ಲಾಬಿ

ಮಂಗಳೂರಿನಲ್ಲಿ ಮಲೇಷ್ಯನ್ ಸ್ಯಾಂಡ್ ಲಾಬಿ ನಡೆಯುತ್ತಿದೆ. 1 ಲಕ್ಷ ಟನ್ ಮಲೇಷ್ಯಾ ಮರಳು ನಗರಕ್ಕೆ ತರಿಸಲಾಗಿದೆ ಎಂಬ ಆರೋಪವಿದೆ. ಮಲೇಷ್ಯದ ಮರಳಿನಿಂದ ಕಟ್ಟಡಗಳ ಸ್ಲ್ಯಾಬ್‌ಗಳಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ಜಿಲ್ಲೆಯ ಮರಳೇ ಕಟ್ಟಡ ನಿರ್ಮಾಣಕ್ಕೆ ಬೇಕೆಂದು ಕಾಂಟ್ರಾಕ್ಟರ್‌ಗಳೂ ಹೇಳುತ್ತಿದ್ದಾರೆ. ಹೀಗಿರುವಾಗ ಮಲೇಷ್ಯದ ಮರಳು ತರಿಸುವ ಅವಶ್ಯವೇನಿತ್ತು ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ಕ್ಯಾ. ಬ್ರಿಜೇಶ್ ಚೌಟ, ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ಸುಧೀರ್ ಕಣ್ಣೂರು, ರೂಪಾ ಡಿ. ಬಂಗೇರ, ರವೀಂದ್ರಕುಮಾರ್, ಮೀರಾ ಕರ್ಕೇರ, ಗ್ಲಾಡಿನ್ ಡಿಸಿಲ್ವ, ಸಂದೀಪ್ ಶೆಟ್ಟಿ, ಆನಂದ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News