ಅಸ್ತಾನ ವಿರುದ್ಧ ಎಫ್‌ಐಆರ್ ದಾಖಲಿಸಲು ಸರಕಾರದ ಅನುಮತಿಯ ಅಗತ್ಯವಿಲ್ಲ: ಅಲೋಕ್ ವರ್ಮಾ

Update: 2018-12-07 17:07 GMT

ಹೊಸದಿಲ್ಲಿ,ಡಿ.7: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧ ಎಫ್‌ಐಆರ್ ದಾಖಲಿಸಲು ಸರಕಾರದ ಅನುಮತಿಯ ಅಗತ್ಯವಿಲ್ಲ ಎಂದು ಹಿರಿಯ ಕಾನೂನು ಅಧಿಕಾರಿ ತಿಳಿಸಿದ್ದರು ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್ ವಿರುದ್ಧ ಅಸ್ತಾನ ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಸಿದ ವರ್ಮಾ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಸರಕಾರದ ಅನುಮತಿ ಪಡೆಯುವುದು ಅಗತ್ಯವೇ ಎಂಬ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಪಿ.ಎಸ್ ನರಸಿಂಹಯ್ಯ ಅವರ ಸಲಹೆಯನ್ನು ಕೋರಲಾಗಿತ್ತು. ಅದಕ್ಕೆ ಅವರು ಅಂಥ ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ತಿಳಿಸಿದ್ದರು ಎಂದು ವರ್ಮಾ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸರಕಾರಿ ಉದ್ಯೋಗಿಯ ವಿರುದ್ಧ ಈಗಾಗಲೇ ತನಿಖೆ ನಡೆಯುತ್ತಿದ್ದರೆ ಮತ್ತು ಅಪರಾಧ ನಡೆದಿರುವುದು ಕಾನೂನು ಜಾರಿ ಸಂಸ್ಥೆಯ ಗಮನಕ್ಕೆ ಬಂದರೆ ಅಂಥ ಸಂದರ್ಭಗಳಲ್ಲಿ ಸರಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಎಎಸ್‌ಜಿ ತಿಳಿಸಿದ್ದರು ಎಂದು ವರ್ಮಾ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವ ಮುನ್ನ ಕೇಂದ್ರ ಸರಕಾರದ ಅನುಮತಿಯನ್ನು ಕೋರಲಾಗಿರಲಿಲ್ಲ ಎಂಬ ಅಂಶವನ್ನು ಅಸ್ಥಾನ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನ್ನು ರದ್ದುಗೊಳಿಸಬೇಕು ಎಂದು ಕೋರಿ ಹಾಕಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಸಾಕಷ್ಟು ದಾಖಲೆಗಳು ಮತ್ತು ಸಾಕ್ಷಿಗಳು ದೊರಕಿದ್ದವು ಎಂದು ವರ್ಮಾ ತಿಳಿಸಿದ್ದಾರೆ. ರಾಕೇಶ್ ಅಸ್ತಾನ, ಡಿಎಸ್‌ಪಿ ದೇವೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್ ವಿರುದ್ಧ ಸಾಕಷ್ಟು ಸಾಕ್ಷಿಗಳು ಸಿಬಿಐಗೆ ದೊರಕಿದೆ ಎಂದು ವರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News