ಸುಪ್ರೀಂ ನ್ಯಾಯಾಧೀಶ ಮದನ್ ಲೋಕೂರ್ ಹೆಸರಿನಲ್ಲಿ ನಕಲಿ ಇ-ಮೇಲ್

Update: 2018-12-08 16:48 GMT

ಹೊಸದಿಲ್ಲಿ, ಡಿ.8: ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಮದನ್ ಭೀಮ್ ಲೋಕೂರ್‌ರ ಅಪರಿಚಿತ ವ್ಯಕ್ತಿಗಳು ಆನ್‌ಲೈನ್ ಮೂಲಕ ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ನ್ಯಾ. ಮದನ್‌ಭೀಮ್ ರ ಇ-ಮೇಲ್ ಐಡಿಯನ್ನು ಬಳಸಿಕೊಂಡು ಕೆಲವು ಅಪರಿಚಿತ ವ್ಯಕ್ತಿಗಳು ಇ-ಮೇಲ್ ಸ್ವೀಕರಿಸಿದ ವ್ಯಕ್ತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ಕಂಪ್ಯೂಟರ್ ವಿಭಾಗದ ಉಪ ನೋಂದಣಾಧಿಕಾರಿ ಅವಧೀಶ್ ಕುಮಾರ್ ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ದೂರಿನ ಜೊತೆಗೆ, ಅಪರಿಚಿತ ವ್ಯಕ್ತಿ ಕಳುಹಿಸಿರುವ ಇ-ಮೇಲ್ ಸಂದೇಶದ ಪ್ರತಿಗಳನ್ನೂ ಸಲ್ಲಿಸಲಾಗಿದೆ.

ಕುಮಾರ್ ಅವರ ಇ-ಮೇಲ್‌ಗೆ ಬಂದಿದ್ದ ಸಂದೇಶದ ಹಿನ್ನೆಲೆಯಲ್ಲಿ ಅವರು ನ್ಯಾಯಾಧೀಶ ಲೋಕೂರ್‌ರ ಗಮನಕ್ಕೆ ವಿಷಯವನ್ನು ತಂದ ಬಳಿಕ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ದುಷ್ಕರ್ಮಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ. ಬಿಹಾರದ ಆಶ್ರಯಧಾಮದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಸಹಿತ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಅಧ್ಯಕ್ಷತೆಯನ್ನು ಮದನ್ ಬಿ.ಲೋಕೂರ್ ವಹಿಸಿದ್ದರು.

ಇ-ಮೇಲ್ ಸೃಷ್ಟಿಕರ್ತರ ಬಗ್ಗೆ ಕೆಲವು ಮಾಹಿತಿ ಲಭ್ಯವಾಗಿದೆ. ಆದರೆ ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಈ ಮಾಹಿತಿಯನ್ನು ಬಹಿರಂಗಗೊಳಿಸುತ್ತಿಲ್ಲ. ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸೈಬರ್ ವಂಚನೆ ವಿಭಾಗದ ಇನ್‌ಸ್ಪೆಕ್ಟರ್ ಭಾನುಪ್ರತಾಪ್ ಅವರ ನೇತೃತ್ವದ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ. ಒಂದು ತಿಂಗಳ ಹಿಂದೆ ಸಿಜೆಐ(ಮುಖ್ಯ ನ್ಯಾಯಾಧೀಶ) ರಂಜನ್ ಗೊಗೋಯ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು ಅದರಲ್ಲಿ ಕೆಲವು ಅವಹೇಳನಕಾರಿ ವಿಷಯಗಳನ್ನು ಪೋಸ್ಟ್ ಮಾಡಿರುವುದನ್ನು ಸುದ್ದಿಸಂಸ್ಥೆ ವರದಿ ಮಾಡಿತ್ತು.

   ಈ ವರ್ಷದ ಆರಂಭದಲ್ಲಿ ಅಂದಿನ ಸಿಜೆಐ ದೀಪಕ್ ಮಿಶ್ರ ಕಾರ್ಯವೈಖರಿಯ ವಿರುದ್ಧ ಚಾರಿತ್ರಿಕ ಸುದ್ದಿಗೋಷ್ಟಿ ನಡೆಸಿದ್ದ ನಾಲ್ವರು ನ್ಯಾಯಾಧೀಶರಲ್ಲಿ ರಂಜನ್ ಗೊಗೊಯ್ ಹಾಗೂ ಮದನ್ ಲೋಕೂರ್ ಸೇರಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News