“ಬಿಜೆಪಿ ಆಡಳಿತದ ರಾಜ್ಯದಲ್ಲಿ ಬೀಫ್ ಸೇವಿಸುತ್ತಿದ್ದೇನೆ”

Update: 2018-12-09 16:23 GMT

ಹೊಸದಿಲ್ಲಿ,ಡಿ.9: ಟ್ವಿಟರ್‌ನಲ್ಲಿ ಬೀಫ್ ಸೇವಿಸುವ ಚಿತ್ರವನ್ನು ಹಾಕಿದ ಕಾರಣಕ್ಕೆ ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾಗೆ ಬೆದರಿಕೆ ಕರೆಗಳು ಮತ್ತು ಟ್ವೀಟ್‌ಗಳು ಬಂದ ಹಿನ್ನೆಲೆಯಲ್ಲಿ ರವಿವಾರ ತನ್ನ ಟ್ವೀಟನ್ನು ಅಳಿಸಿ ಕ್ಷಮೆ ಕೇಳಿದ ಘಟನೆ ನಡೆದಿದೆ. ವಿವಾದಾತ್ಮಕ ಟ್ವೀಟ್ ಮಾಡಿದ ಗುಹಾ, ಹಳೆ ಗೋವಾದಲ್ಲಿ ಉತ್ತಮ ಮುಂಜಾನೆಯನ್ನು ಕಳೆದ ನಂತರ ಪಣಜಿಯಲ್ಲಿ ಮಧ್ಯಾಹ್ನದ ಭೋಜನ ಸೇವಿಸಿದೆವು. ಇದು ಬಿಜೆಪಿ ಆಡಳಿತದ ರಾಜ್ಯವಾಗಿರುವ ಕಾರಣ ನಾನು ಇಲ್ಲಿ ಬೀಫ್ ಸೇವಿಸಲು ನಿರ್ಧರಿಸಿದೆ ಎಂದು ತಾನು ಬೀಫ್ ಸೇವಿಸುತ್ತಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ವೀಟಿಗರೊಬ್ಬರು, ಹಿಂದುವೊಬ್ಬ ಬೀಫ್ ತಿಂದು ಅದನ್ನು ಪ್ರಚಾರ ಮಾಡಿದರೆ ಆತ ಧರ್ಮಕ್ಕೆ ಕಳಂಕವಾಗುತ್ತಾನೆ. ರಾಮಚಂದ್ರ ಗುಹಾ ಹೀಗೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಇಂಥ ಹೀನಾಯ ಕೆಲಸ ಮಾಡುವ ಮೂಲಕ ಅವರು ಇಡೀ ಹಿಂದು ಸಮಾಜವನ್ನು ಅವಮಾನಿಸಿದ್ದಾರೆ. ಅವರಿಗೆ ಸರಿಯಾದ ಉತ್ತರ ನೀಡಬೇಕಿದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವಿಟರ್ ಬಳಕೆದಾರನನ್ನು ಗುಹಾ, ಸಂಶೋಧನಾ ಮತ್ತು ವಿಶ್ಲೇಷಣೆ ವಿಭಾಗದ ಮಾಜಿ ಅಧಿಕಾರಿ ಆರ್.ಕೆ.ಯಾದವ್ ಎಂದು ಗುರುತಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ದಿಲ್ಲಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ “ನನಗೆ ಮತ್ತು ನನ್ನ ಪತ್ನಿಗೆ ಬೆದರಿಕೆ ಹಾಕಿದ್ದಾನೆ” ಎಂದು ಗುಹಾ ಆರೋಪಿಸಿದ್ದಾರೆ. ನಂತರ ಟ್ವಿಟರ್‌ನಲ್ಲಿ ಹಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮಚಂದ್ರ ಗುಹಾ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ತನ್ನಿಷ್ಟದ ತಿಂಡಿ ತಿನ್ನುವ, ಬಟ್ಟೆ ಧರಿಸುವ ಮತ್ತು ಪ್ರೀತಿಸುವ ಹಕ್ಕು ಇರಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News