ಕಣ್ಣೂರಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
ಕಣ್ಣೂರು, ಡಿ. 9: ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಬುಧಾಬಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೊದಲ ಹಾರಾಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕೇರಳದ ನಾಲ್ಕನೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಆಹ್ವಾನಿತರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮ ಚಾಂಡಿ ಹೆಸರು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ವಿಮಾನ ನಿಲ್ದಾಣ ಉದ್ಘಾಟನ ಕಾರ್ಯಕ್ರಮ ಬಹಿಷ್ಕರಿಸಿತ್ತು. ಶಬರಿಮಲೆ ದೇವಾಲಯ ವಿವಾದ ಕುರಿತ ಸರಕಾರದ ನಿಲುವು ವಿರೋಧಿಸಿ ಬಿಜೆಪಿ ಕೂಡ ದೂರ ಉಳಿದಿತ್ತು. ‘‘ಇದು ಉತ್ತರ ಕೇರಳದ ಚಾರಿತ್ರಿಕ ಕ್ಷಣ. ಈ ನೂತನ ವಿಮಾನ ನಿಲ್ದಾಣ ಮಲಬಾರ್ ಪ್ರದೇಶದಲ್ಲಿ ಬೆಳವಣಿಗೆಗೆ ಉತ್ತೇಜನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
1995ರಲ್ಲಿ ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಚಿಂತನೆಯನ್ನು ಮುಂದಿಟ್ಟ ಮಾಜಿ ನಾಗರಿಕ ವಿಮಾನ ಯಾನ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಖಾಸಗಿ-ಸರಕಾರಿ ವಿಮಾನ ನಿಲ್ದಾಣವಾದ ಕಣ್ಣೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಕೆಐಎಎಲ್)ನಲ್ಲಿ ಶೇ. 67.14 ಪಾಲನ್ನು ಖಾಸಗಿ ವ್ಯಕ್ತಿಗಳು (ಅನಿವಾಸಿ ಭಾರತೀಯರು) ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಹೊಂದಿವೆ. ಉಳಿದ ಶೇ. 32.86 ಪಾಲನ್ನು ರಾಜ್ಯ ಸರಕಾರ ಹೊಂದಿದೆ.
ಕಣ್ಣೂರು: ವಿಮಾನ ನಿಲ್ದಾಣದಿಂದ 186 ಯಾತ್ರಿಕರನ್ನೊಳಗೊಂಡ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಬೆಳಗ್ಗೆ 10.05 ಕ್ಕೆ ಅಬುದಾಬಿಗೆ ಹೊರಡುವ ಮೂಲಕ ಮೊದಲ ಹಾರಾಟ ಪ್ರಾರಂಭಿಸಿತು. ಬಳಿಕ 11.30ಕ್ಕೆ ದಿಲ್ಲಿಯಿಂದ ಕಣ್ಣೂರಿಗೆ ಗೋ ಏರ್ ವಿಮಾನ ಬಂದಿಳಿಯಿತು. ಅದೇ ವಿಮಾನ ಅಪರಾಹ್ನ 1 ಗಂಟೆಗೆ ಬೆಂಗಳೂರಿಗೆ ಪ್ರಯಾಣಿಸಿತು.