ಖ್ಯಾತ ಇತಿಹಾಸಕಾರ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಮಾಜಿ ವಿಸಿ ಮುಶಿರುಲ್ ಹಸನ್ ನಿಧನ

Update: 2018-12-10 09:11 GMT

ಹೊಸದಿಲ್ಲಿ, ಡಿ.10: ಖ್ಯಾತ ಇತಿಹಾಸಕಾರ ಹಾಗೂ ಜಾಮಿಯ ಮಿಲ್ಲಿಯಾ ಇಸ್ಲಾಮಿಯಾದ ಮಾಜಿ ಉಪಕುಲಪತಿ ಪ್ರೊಫೆಸರ್ ಮುಶಿರುಲ್ ಹಸನ್ ಇಂದು ಬೆಳಗ್ಗೆ ನಿಧನರಾದರು. ಆವರಿಗೆ 71 ವರ್ಷ ವಯಸ್ಸಾಗಿತ್ತು. ಆವರು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾದ ಮಾಜಿ ಮಹಾನಿರ್ದೇಶಕರಾಗಿದ್ದರಲ್ಲದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಈ ಸಂಸ್ಥೆಗಳ ಹೊರತಾಗಿ ಇರಾನ್ ದೂತಾವಾಸದ ಇಂಡೋ-ಇರಾನ್ ಸೊಸೈಟಿ ಹಾಗೂ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ತಮ್ಮ ಸಾಧನೆಗಳಿಗಾಗಿ ಪ್ರೊಫೆಸರ್ ಮುಶಿರುಲ್ ಹಸನ್ 2007ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ದೇಶ ವಿಭಜನೆಯ ಬಗ್ಗೆ ಹಾಗೂ ದಕ್ಷಿಣ ಏಷ್ಯಾದಲ್ಲಿ ಇಸ್ಲಾಂ ಇತಿಹಾಸದ ಬಗ್ಗೆ ಅವರು ವಿಸ್ತೃತವಾಗಿ ಬರೆದಿದ್ದರು.

‘‘ಇಂಡಿಯಾ ಪಾರ್ಟಿಶನ್ : ದಿ ಅದರ್ ಫೇಸ್ ಆಫ್ ಫ್ರೀಡಂ,’’ ‘‘ವೆನ್ ಸ್ಟೋನ್ ವಾಲ್ಸ್ ಕ್ರೈ,’’ ‘‘ಪಾಟ್ನರ್ಸ್ ಇನ್ ಫ್ರೀಡಂ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ,’’ (ರಕ್ಷಂದ ಜಲೀಲ್ ಸಹ ಲೇಖಕರಾಗಿದ್ದರು) ಹಾಗೂ ‘‘ಫ್ರಂ ಪ್ಲೂರಲಿಸಂ ಟು ಸಪರೇಟಿಸಂ: ಖಸ್ಬಾಸ್ ಇನ್ ಕೊಲೋನಿಯಲ್ ಇಂಡಿಯಾ’’ ಅವರ ಕೆಲವು ಕೃತಿಗಳು.

2014ರಲ್ಲಿ ಕಾರು ಅಪಘಾತವೊಂದರಲ್ಲಿ ಅವರ ತಲೆಗೆ ಗಂಭೀರ ಏಟು ತಗಲಿತ್ತು. ಕಳೆದ ಹಲವು ವರ್ಷಗಳಿಂದ ಅವರು ಡಯಾಲಿಸಿಸ್‌ಗೂ ಒಳಗಾಗಿದ್ದರು.
ಅವರ ನಿಧನಕ್ಕೆ ಹಲವಾರು ಶಿಕ್ಷಣ ತಜ್ಞರು ಹಾಗೂ ರಾಜಕೀಯ ನೇತಾರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News