ಅಮಾನ್ಯೀಕರಣ ಜಾರಿ ಪ್ರಕ್ರಿಯೆ ಸರಿಯಾಗಿರಲಿಲ್ಲ: ಉದಯ್ ಕೋಟಕ್

Update: 2018-12-10 09:16 GMT

ಮುಂಬೈ, ಡಿ.10: ‘‘ವಿವಾದಾಸ್ಪದ ಅಮಾನ್ಯೀಕರಣ ಕ್ರಮವನ್ನು ಯೋಜನಾಬದ್ಧವಾಗಿ ಜಾರಿಗೊಳಿಸಿದ್ದರೆ ಅದರ ಪರಿಣಾಮ ಭಿನ್ನವಾಗಿರುತ್ತಿತ್ತು. ಎರಡು ಸಾವಿರ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳ ಬಿಡುಗಡೆಯಂತಹ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತಿತ್ತು’’ ಎಂದು ಕೋಟಕ್ ಮಹೀಂದ್ರ ಬ್ಯಾಂಕಿನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಉದಯ್ ಕೋಟಕ್ ಹೇಳಿದ್ದಾರೆ.

‘‘ಅಮಾನ್ಯೀಕರಣದ ಸಂದರ್ಭ ನೀವು ರೂ.500 ಹಾಗೂ ರೂ.1000ದ ನೋಟುಗಳನ್ನು ವಾಪಸ್ ಪಡೆಯುತ್ತಿದ್ದೀರೆಂದಾದರೆ ರೂ.2,000ದ ನೋಟುಗಳನ್ನು ಏಕೆ ಬಿಡುಗಡೆಗೊಳಿಸಬೇಕಿತ್ತು?’’ ಎಂದು ಅವರು ಪ್ರಶ್ನಿಸಿದರು.

ಉದಯ್ ಕೋಟಕ್ ಅವರು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ.

‘‘ಸರಿಯಾದ ಮುಖಬೆಲೆಯ ನೋಟುಗಳನ್ನು ದೊಡ್ಡ ಸಂಖ್ಯೆಯಲ್ಲಿ ಲಭ್ಯ ಮಾಡಬೇಕಿತ್ತು. ಇಂತಹ ಕ್ರಮ ಕೈಗೊಂಡಿದ್ದರೆ ಇಂದು ಅಮಾನ್ಯೀಕರಣದ ಬಗ್ಗೆ ನಮ್ಮ ಅಭಿಪ್ರಾಯ ಬೇರೆಯೇ ಆಗಿರುತ್ತಿತ್ತು. ಆದರೆ ಹಣಕಾಸು ಕ್ಷೇತ್ರಕ್ಕೆ ಅಮಾನ್ಯೀಕರಣ ದೊಡ್ಡ ವರದಾನವಾಗಿದೆ ಎಂದು ಅವರು ಹೇಳಿದರು.

ಸಣ್ಣ ಉದ್ಯಮಗಳು ಈಗ ಕಷ್ಟಕರ ಪರಿಸ್ಥಿತಿಯಲ್ಲಿವೆ ಎಂದು ಹೇಳಿದ ಅವರು, ಈ ಕ್ಷೇತ್ರದ ಪುನರುಜ್ಜೀವಕ್ಕೆ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News