ಬುಲಂದ್ ‍ಶಹರ್ ಹಿಂಸಾಚಾರ: ಸಂಶಯಗಳನ್ನು ಹುಟ್ಟು ಹಾಕುತ್ತಿವೆ ಗೋಹತ್ಯೆಗೆ ಸಂಬಂಧಿಸಿದ ಬಂಧನಗಳು

Update: 2018-12-10 09:52 GMT

ಬುಲಂದ್‍ಶಹರ್, ಡಿ.10: ಬುಲಂದ್ ‍ಶಹರ್ ‍ನಲ್ಲಿ ಇತ್ತೀಚೆಗೆ ಹಿಂಸಾಚಾರದ ವೇಳೆ ಪೊಲೀಸ್ ಅಧಿಕಾರಿ ಮತ್ತು ಯುವಕನೊಬ್ಬ ಸಾವಿಗೀಡಾಗಿದ್ದ.  ಈ ಹಿಂಸಾಚಾರಕ್ಕೆ ಕಾರಣವಾದದ್ದು ಗೋಹತ್ಯೆ ನಡೆದಿದೆ ಎನ್ನುವ ವದಂತಿ. ಇದೀಗ ಗೋಹತ್ಯೆ ಆರೋಪದಲ್ಲಿ ನಾಲ್ಕು ಮಂದಿ ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದು, ಈ ಬಂಧನ ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳನ್ನೇ ಎತ್ತಿದೆ.

ದನಗಳ ಕಳೇಬರ ಪತ್ತೆಯಾಗಿದೆ ಎಂದು ಬಜರಂಗದಳ ನಾಯಕ ಯೋಗೇಶ್ ರಾಜ್ ಎಂಬಾತ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಂಧಿಸಿದ್ದ ನಾಲ್ಕು ಮಂದಿಯಲ್ಲಿ ಇಬ್ಬರ ಹೆಸರು ಎಫ್ ‍ಐಆರ್ ನಲ್ಲಿರಲಿಲ್ಲ. ಯೋಗೇಶ್ ರಾಜ್ ತನ್ನ ದೂರಿನಲ್ಲಿ  ಘಟನೆ ನಡೆದ ಸ್ಥಳದಿಂದ 11 ಕಿಮೀ ದೂರದ ನಯಾಬಾಸ್ ಗ್ರಾಮದ ಏಳು ಮಂದಿಯ ಹೆಸರನ್ನು ಉಲ್ಲೇಖಿಸಿದ್ದ.

ಹಿಂಸಾಚಾರ ಹಾಗೂ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ನಲ್ಲಿ 27 ಜನರ ಹೆಸರಿದ್ದು  50 ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಒಂಬತ್ತು ಮಂದಿಯನ್ನು ಇಲ್ಲಿಯ ತನಕ ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಜರಂಗದಳದ ಯೋಗೇಶ್ ರಾಜ್‍ ನ ಬಂಧನ ಇನ್ನೂ ಆಗಿಲ್ಲ.

ಆದರೆ ಗೋ ಹತ್ಯೆಗೆ ಸಂಬಂಧಿಸಿದಂತೆ ಆತನ ದೂರಿನ ಆಧಾರದಲ್ಲಿ ಬಂಧಿತರ ಪೈಕಿ ಒಬ್ಬ ಬಟ್ಟೆ ವ್ಯಾಪಾರಿ ಸರ್ಫುದ್ದೀನ್ ಆಗಿದ್ದಾರೆ. ದನದ ಕಳೇಬರ ಪತ್ತೆಯಾದ ದಿನ ಸರ್ಫುದ್ದೀನ್ ಘಟನೆ ನಡೆದ ಸ್ಥಳಕ್ಕಿಂತ 40 ಕಿಮೀ ದೂರ, ಬುಲಂದ್‍ ಶಹರ್ ಹೊರವಲಯದಲ್ಲಿ ನಡೆಯುತ್ತಿದ್ದ ಮೂರು ದಿನಗಳ ಇಜ್ತೆಮದಲ್ಲಿ ವಾಹನ ಪಾರ್ಕಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರೆಂದು ಅವರ ಕುಟುಂಬ ಸದಸ್ಯರು ಹೇಳುತ್ತಿದ್ದಾರೆ.

``ಗ್ರಾಮದ ಮಸೀದಿಯಲ್ಲಿನ ಮೈಕ್ರೊಫೋನ್ ಅನ್ನು ಸಂಘಪರಿವಾರದ ಸಂಘಟನೆಗಳು ತೆಗೆದಿದ್ದವು, ಇದರಿಂದಾಗಿ ನಮಗೆ ಮಸೀದಿಯ ಆಝಾನ್ ಕೇಳಿಸುವುದಿಲ್ಲ,'' ಎಂದು ಅವರು ಹೇಳುತ್ತಾರೆ. ಹೊಸ ಮೈಕ್ ಅಳವಡಿಸಲು ಮಸೀದಿ ಆಡಳಿತದ ಮುಖ್ಯಸ್ಥನಾಗಿದ್ದ ಸರ್ಫುದ್ದೀನ್ ಪ್ರಯತ್ನಿಸುತ್ತಿದ್ದು, ಆದರೆ ಯೋಗೇಶ್ ಗೆ ಅದು ಇಷ್ಟವಾಗಿಲಿಲ್ಲ ಎಂಬುದು ಗ್ರಾಮಸ್ಥರ ವಿವರಣೆ.

ಇನ್ನೊಬ್ಬ ಬಂಧಿತ ಸಾಜಿದ್ ಅಲಿ (26) ಕೂಡ ಇಜ್ತೆಮಗೆ ಆಗಮಿಸಿದ್ದನೇ ಹೊರತು ಹಿಂಸೆ ನಡೆದ ಗ್ರಾಮದಲ್ಲಿರಲಿಲ್ಲ ಎಂದು ಚಹಾ ಮಾರಾಟಗಾರನಾಗಿರುವ ಅವರ ಮಾವ ಶಬೀರ್ ಹೇಳುತ್ತಾರೆ. ಸಾಜಿದ್ ಫರೀದಾಬಾದ್‍ನಲ್ಲಿ ಸಿಗರೇಟ್ ಮಾರಾಟ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಎಫ್‍ಐಆರ್ ನಲ್ಲಿ ಹೆಸರು ಉಲ್ಲೇಖವಿಲ್ಲದೇ ಇದ್ದರೂ ವಾಚ್ ರಿಪೇರಿ ಮಾಡುವ ಆಸಿಫ್ (24) ಹಾಗೂ ದಿನಗೂಲಿ ಕಾರ್ಮಿಕ ಬನ್ನೇ ಖಾನ್ ಎಂಬವರನ್ನು ಬಂಧಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾದ ನಂತರ ಆಸಿಫ್  ಮುಂಬೈಗೆ ಹೋಗಿದ್ದು ಇಜ್ತೆಮಾಗೆಂದು ಊರಿಗೆ ಬಂದಿದ್ದರು. ಮನೆಯಲ್ಲಿ ಮಲಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ಬನ್ನೇ ಖಾನ್ ಘಟನೆ ನಡೆದ ಸ್ಥಳಕ್ಕಿಂತ ಆ ದಿನ 65 ಕಿಮೀ ದೂರದಲ್ಲಿದ್ದ. ಎಫ್‍ ಐಆರ್ ‍ನಲ್ಲಿ ನಮೂದಿಸಲಾಗಿಲ್ಲದ ಹೆಸರಿನ ಇಬ್ಬರನ್ನು ಏಕೆ ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಪೊಲೀಸರಿನ್ನೂ ಉತ್ತರ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News