ಈರುಳ್ಳಿ ಬೆಳೆಯಲು ಖರ್ಚು ಮಾಡಿದ್ದು 2 ಲಕ್ಷ ರೂ., ಗಳಿಸಿದ್ದು 6 ರೂ.!

Update: 2018-12-10 09:56 GMT

ಮುಂಬೈ, ಡಿ.10: ಪಾತಾಳಕ್ಕೆ ಕುಸಿದಿರುವ ಈರುಳ್ಳಿ ಬೆಲೆಗಳಿಂದ ಕಂಗಾಲಾಗಿ 750 ಕೆಜಿ ಈರುಳ್ಳಿ ಮಾರಾಟ ಮಾಡಿ ದೊರೆತ  1,064 ರೂ.ಗಳನ್ನು ಮಹಾರಾಷ್ಟ್ರದ ಬೆಳೆಗಾರರೊಬ್ಬರು ಪ್ರಧಾನಿಗೆ ಕಳುಹಿಸಿದ ಬೆನ್ನಿಗೇ ಅಹ್ಮದ್ ‍ನಗರ ಜಿಲ್ಲೆಯ ಇನ್ನೊಬ್ಬ ಬೆಳೆಗಾರ ಶ್ರೇಯಸ್ ಅಭಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ತಮ್ಮ ಪ್ರತಿಭಟನೆಯ ರೂಪವಾಗಿ 6 ರೂಪಾಯಿಯನ್ನು ಮನಿ ಆರ್ಡರ್ ಮೂಲಕ ಕಳುಹಿಸಿದ್ದಾರೆ.

ಶ್ರೇಯಸ್ ತಾವು ಬೆಳೆದ 2,657 ಕೆಜಿ ಈರುಳ್ಳಿಯನ್ನು ಕೆಜಿಗೆ ಸುಮಾರು ಒಂದು ರೂಪಾಯಿಯಂತೆ ರಖಂ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. ಕೊನೆಗೆ ಸಾಗಾಟ ಹಾಗೂ ಕಾರ್ಮಿಕರ ವೇತನ ಸೇರಿದಂತೆ ಎಲ್ಲಾ ವೆಚ್ಚಗಳನ್ನೂ ಕಳೆದು ಅವರ ಬಳಿ ಉಳಿದಿದ್ದು ಕೇವಲ ರೂ 6. ಅದನ್ನು ಅವರು ಮುಖ್ಯಮಂತ್ರಿಗೆ ಆಕ್ರೋಶದಿಂದ ಕಳುಹಿಸಿದ್ದಾರೆ. ತಮಗೆ ಅಷ್ಟೊಂದು ಈರುಳ್ಳಿ ಮಾರಾಟ ಮಾಡಿ ಕೇವಲ ರೂ 2,916 ದಕ್ಕಿದ್ದಾಗಿ ಶ್ರೇಯಸ್ ಹೇಳಿಕೊಂಡಿದ್ದಾರೆ. ``ಈ ವರ್ಷ ಈರುಳ್ಳಿ ಬೆಳೆಯಲು ರೂ 2 ಲಕ್ಷ ವೆಚ್ಚ ಮಾಡಿದ್ದೆ ಆದರೆ ವೆಚ್ಚವೆಲ್ಲಾ ಕಳೆದು, ನನ್ನ ಗಳಿಕೆ  ಕೇವಲ ಆರು ರೂಪಾಯಿ, ಸಾಲದ ಹಣ ತೀರಿಸುವುದು ಹೇಗೆಂದು ತಿಳಿದಿಲ್ಲ'' ಎಂದು ಅವರು ಅಲವತ್ತುಕೊಂಡಿದ್ದಾರೆ.

ಈ ಬಾರಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಇಳುವರಿ ಅತ್ಯಧಿಕವಾಗಿರುವುದರಿಂದ ತಮ್ಮ ಬೆಳೆಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ರೈತರಿಗೆ ಬಂದೊದಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News