ಬುಲಂದ್‍ಶಹರ್ ಹಿಂಸಾಚಾರ: ಹತ್ಯೆಗೀಡಾದ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿದ ಬಿಜೆಪಿ ಸಂಸದ

Update: 2018-12-10 10:50 GMT

ಲಕ್ನೋ, ಡಿ.10: ಬುಲಂದ್‍ಶಹರ್ ನಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ ಘಟನೆಯ ಪ್ರಮುಖ ಆರೋಪಿ, ಸದ್ಯ ತಲೆಮರೆಸಿಕೊಂಡಿರುವ ಬಜರಂಗದಳದ ಯೋಗೇಶ್ ರಾಜ್ ಸಿಂಗ್ ನನ್ನು ಸ್ಥಳೀಯ ಸಂಸದ ಭೋಲಾ ರಾಮ್ ಬಹಿರಂಗವಾಗಿ  ಬೆಂಬಲಿಸಿ ಆತ ಒಳ್ಳೆಯ ಹಾಗೂ ಕಣ್ಣು ತೆರೆಸುವ ಕೆಲಸ ಮಾಡಿದ್ದಾನೆಂದು ಹೇಳಿದ ಬೆನ್ನಿಗೇ ಮೀರತ್ ಸಂಸದ ರಾಜೇಂದ್ರ ಅಗರ್ವಾಲ್ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯನ್ನು ಟಾರ್ಗೆಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗೋ ಹತ್ಯೆ ಮತ್ತು ಗೋ ಕಳ್ಳಸಾಗಣಿಕೆಯನ್ನು ತಡೆಯಲು ವಿಫಲರಾಗಿದ್ದೇ ಅವರನ್ನು ಟಾರ್ಗೆಟ್ ಮಾಡಲು ಕಾರಣವೇ ಎಂದು ತನಿಖಾ ತಂಡ ಪರಿಶೀಲಿಸಬೇಕೆಂದು ಅವರು ಹೇಳಿದ್ದಾರೆ.

“ಬುಲಂದ್‍ಶಹರ್‍ನಲ್ಲಿ ಡಿಸೆಂಬರ್ 3ರಂದು ನಡೆದ ಘಟನೆ ಖಂಡನೀಯ. ಆದರೆ ಹಿಂಸಾಚಾರಕ್ಕಿಂತ ಮುನ್ನ ಸಿಯಾನ ಪೊಲೀಸ್ ಠಾಣೆಯಲ್ಲಿ ಗೋ ಕಳ್ಳಸಾಗಣಿಕೆಗೆ ಸಂಬಂಧಿಸಿದಂತೆ ದಾಖಲಾದ ಎಫ್‍ಐಆರ್  ಕುರಿತಂತೆ  ಠಾಣಾಧಿಕಾರಿ ಕ್ರಮವೇಕೆ ಕೈಗೊಂಡಿರಲಿಲ್ಲ ಎಂದೂ ತನಿಖೆ ನಡೆಸಬೇಕು” ಎಂದು ಅಗರ್ವಾಲ್ ಹೇಳಿದ್ದಾರೆ.

“ಆದಿತ್ಯನಾಥ್ ಅವರು ಗೋಹತ್ಯೆಯನ್ನು ಗಂಭೀರ ಅಪರಾಧ ಎಂದು ಘೋಷಿಸಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ಘಟನೆಗಳನ್ನು ನಿಯಂತ್ರಿಸುವುದು ಆದಿತ್ಯನಾಥ್ ಅವರ ಕನಸಾಗಿದೆ, ಆದರೆ ಕೆಲವು ಉನ್ನತ ಅಧಿಕಾರಿಗಳು ಹಾಗೂ  ಪೊಲೀಸ್ ಠಾಣಾ ಹಂತದ ಅಧಿಕಾರಿಗಳು ಮುಖ್ಯಮಂತ್ರಿಯ ಈ ದೀರ್ಘ ಕಾಲದ ಕನಸು ನನಸಾಗಿಸುವಲ್ಲಿ ಅಡ್ಡಿಯುಂಟು ಮಾಡುತ್ತಿದ್ದಾರೆ. ಎಲ್ಲಾ ಅಧಿಕಾರಿಗಳು ಭ್ರಷ್ಟರೆಂದು ನಾನು ಹೇಳುವುದಿಲ್ಲ ಆದರೆ ತಮ್ಮ ರಾಜಕೀಯ ಹಾಗೂ ಆರ್ಥಿಕ ಹಿತಾಸಕ್ತಿಗಳಿಗಾಗಿ ಕೆಲವರು ಬಿಜೆಪಿ ಸರಕಾರದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ'' ಎಂದು ಮಾಜಿ ಆರೆಸ್ಸೆಸ್ ಪ್ರಚಾರಕರಾಗಿರುವ ಅಗರ್ವಾಲ್ ಹೇಳಿದ್ದಾರೆ.

``ನಾನು ಗೋಹತ್ಯೆಗೆ ಸಂಬಂಧಿಸಿದಂತೆ  ಕಿಥೋರೆ ಹಾಗೂ ಭಾವನ್ಪುರ್ ಠಾಣೆಗಳಲ್ಲಿ ದೂರು ದಾಖಲಿಸಿದರೂ ಪ್ರಯೋಜನವಾಗಿಲ್ಲ'' ಎಂದೂ ಅವರು ದೂರಿಕೊಂಡರು. ಆದರೆ ಎರಡೂ ಠಾಣೆಗಳ ಪೊಲೀಸ್ ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News