ಮೋದಿ ಸರಕಾರದ ಕ್ರಮಗಳಿಗೆ ಐಎಂಎಫ್ ಮುಖ್ಯ ಆರ್ಥಿಕ ತಜ್ಞರ ಶ್ಲಾಘನೆ

Update: 2018-12-10 10:52 GMT

ವಾಷಿಂಗ್ಟನ್, ಡಿ.10: ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಬಹಳಷ್ಟು ಪ್ರಗತಿ ಸಾಧಿಸಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಆರ್ಥಿಕ ತಜ್ಞ ಮೌರಿಸ್ ಒಬ್ಸ್ಟ್‍ಫೆಲ್ಡ್ ಹೇಳಿದರು.

ಈ ತಿಂಗಳು ನಿವೃತ್ತರಾಗಲಿರುವ ಮೌರಿಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ``ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನಿಜವಾಗಿಯೂ ಕೆಲವೊಂದು ಉತ್ತಮ ಮೂಲಭೂತ ಸುಧಾರಣೆಗಳನ್ನು ತಂದಿದೆ. ಇವುಗಳಲ್ಲಿ ಜಿಎಸ್‍ಟಿ, ದಿವಾಳಿತನಕ್ಕೆ ಸಂಬಂಧಿಸಿದ ನೀತಿಸಂಹಿತೆ ಹಾಗೂ ವಿತ್ತೀಯ ಸೇರ್ಪಡೆ ಇವುಗಳಲ್ಲಿ ಬಹಳ ಮಹತ್ವದ್ದಾಗಿದೆ,'' ಎಂದು ಹೇಳಿದರು.

``ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಭಿವೃದ್ಧಿ ಅಷ್ಟೊಂದು ಗಮನಾರ್ಹವಾಗಿಲ್ಲದೇ ಇದ್ದರೂ ಸರಾಸರಿಯಾಗಿ ಅಭಿವೃದ್ಧಿ ಉತ್ತಮವಾಗಿದೆ,'' ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಪೊರೇಟ್ ವಲಯದ ಸಾಲದ ಪ್ರಮಾಣದಿಂದ ಇರುವ ಆರ್ಥಿಕ ಒತ್ತಡಗಳ ಬಗ್ಗೆಯೂ ಹೇಳಿಕೊಂಡ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು. ``ಆದರೆ ಮುಂದಿನ ಚುನಾವಣಾ ವರ್ಷ ಗಮನದಲ್ಲಿರಿಸಿ ಆರ್ಥಿಕ ಪ್ರಗತಿಯ ವೇಗ ತಗ್ಗಿಸುವ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಕೆಯಿದೆ,'' ಎಂದೂ ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News