ಕೋಣೆಯಲ್ಲಿ ಕೂಡಿಹಾಕಿ ಹೋದ ಪುತ್ರ: ಹಸಿವೆಯಿಂದ ತಾಯಿ ಮೃತ್ಯು

Update: 2018-12-10 16:02 GMT
ಸಾಂದರ್ಭಿಕ ಚಿತ್ರ

ಶಹಜಹಾನ್‌ಪುರ (ಉತ್ತರಪ್ರದೇಶ), ಡಿ. 10: ಶಹಜಹಾನ್‌ಪುರದ ರೈಲ್ವೆ ಕಾಲನಿಯ ಮನೆಯೊಂದರಲ್ಲಿ 80 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪುತ್ರ ತಾಯಿಯನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಹೋಗಿರುವುದರಿಂದ ಅವರು ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಮಹಿಳೆಯನ್ನು ಲೀಲಾವತಿ ಎಂದು ಗುರುತಿಸಲಾಗಿದೆ. ಶಹಜಹಾನ್‌ಪುರದ ರೈಲ್ವೆ ಕಾಲನಿಯ ಮನೆಯೊಂದರಲ್ಲಿ ಕಳೆದ ಎರಡು ದಿನಗಳಿಂದ ದುರ್ನಾತ ಬರುತ್ತಿರುವುದಾಗಿ ಸ್ಥಳೀಯರು ರವಿವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಾಗಿಲ ಮುರಿದು ಮನೆಯ ಒಳಗೆ ಪ್ರವೇಶಿಸಿದಾಗ ಲೀಲಾವತಿ ಅವರ ಕೊಳೆತ ಮೃತದೇಹ ಬೆಡ್ ಮೇಲೆ ಪತ್ತೆಯಾಗಿತ್ತು. ಸಾವಿನ ಖಚಿತ ಕಾರಣ ತಿಳಿಯಲು ನಾವು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಪತ್ನಿ ತ್ಯಜಿಸಿ ಹೋದ ಬಳಿಕ ಲೀಲಾವತಿ ಅವರ ಪುತ್ರ ಸಲೀಲ್ ಚೌಧರಿ ಮದ್ಯಪಾನ ಆರಂಭಿಸಿದರು. ಸಲೀಲ್ ತಾಯಿಯನ್ನು ಮನೆಯ ಒಳಗೆ ಇರಿಸಿ ಬೀಗ ಹಾಕಿ ತೆರಳಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮನೆಯ ಒಳಗೆ ಆಹಾರ ಇರಲಿಲ್ಲ. ಲೀಲಾವತಿ ಅವರು ಹಸಿವೆ ಹಾಗೂ ಅನಾರೋಗ್ಯ ದಿಂದ ಮೃತಟ್ಟಿರಬಹುದು ಎಂದು ಸದಾರ್ ಬಝಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಸ್ವೀರ್ ಸಿಂಗ್ ತಿಳಿಸಿದ್ದಾರೆ. ಒಂದು ವೇಳೆ ಸಾವು ಹಸಿವಿನಿಂದ ಸಂಭವಿಸಿರುವುದು ದೃಢಪಟ್ಟರೆ, ಸಲೀಲ್ ಚೌಧರಿ ವಿರುದ್ಧ ನಿರ್ಲಕ್ಷದ ಪ್ರಕರಣ ದಾಖಲಿಸಲಾಗುವುದು. ಸಲೀಲ್ ಚೌಧರಿ ಕರೆ ಸ್ವೀಕರಿಸುತ್ತಿಲ್ಲ. ನಾವು ಆತನನ್ನು ಸಂಪರ್ಕಿಸಲು ನಿರಂತರ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಚೌಧರಿಯನ್ನು ಎರಡು ಬಾರಿ ಅಮಾನತು ಮಾಡಲಾಗಿತ್ತು. ಆತ ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಶಹಜಹಾನ್‌ಪುರ ರೈಲ್ವೆ ನಿಲ್ದಾಣದ ಸ್ಟೇಶನ್ ಮಾಸ್ಟರ್ ತಿಳಿಸಿದ್ದಾರೆ.

ಲಕ್ನೋ ನಿವಾಸಿಯಾಗಿರುವ ಚೌಧರಿ ಅವರನ್ನು 2005ರಲ್ಲಿ ಶಹಜಹಾನ್ ಪುರ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News