ಮಾನವ ಹಕ್ಕು ಉಲ್ಲಂಘನೆ ವಿರೋಧಿಸಿ ಕಾಶ್ಮೀರ ಕಣಿವೆಯಲ್ಲಿ ಬಂದ್; ಜನಜೀವನ ಅಸ್ತವ್ಯಸ್ತ

Update: 2018-12-10 14:35 GMT

ಶ್ರೀನಗರ, ಡಿ. 10: ಕಾಶ್ಮೀರ ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರತಿಭಟಿಸಿ ಪ್ರತ್ಯೇಕತಾವಾದಿಗಳು ಸೋಮವಾರ ಕರೆ ನೀಡಿದ ಬಂದ್ ನಿಂದಾಗಿ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾನವ ಹಕ್ಕು ದಿನವಾದ ಸೋಮವಾರವೇ ಪತ್ಯೇಕತಾವಾದಿ ನಾಯಕರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀನಗರದ ಹೆಚ್ಚಿನ ಅಂಗಡಿ, ಪೆಟ್ರೋಲ್ ಬಂಕ್ ಹಾಗೂ ಇತರ ಉದ್ಯಮ ಸಂಸ್ಥೆಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಗೆ ತೊಂದರೆ ಉಂಟಾಗಿತ್ತು.

ನಗರದ ಕೆಲವು ಸ್ಥಳಗಳಲ್ಲಿ ಖಾಸಗಿ ಕಾರು ಹಾಗೂ ಆಟೊ ರಿಕ್ಷಾಗಳು ಸಂಚರಿಸುತ್ತಿದ್ದುವು. ಕಣಿವೆಯ ಇತರ ಜಿಲ್ಲೆಯ ಕೇಂದ್ರಗಳಲ್ಲಿ ಕೂಡ ಬಂದ್‌ನ ಬಗ್ಗೆ ಇದೇ ರೀತಿಯ ವರದಿ ಬಂದಿವೆ. ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಬವಿಸದಂತೆ ಕಣಿವೆಯಾದ್ಯಂತ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾನವ ಹಕ್ಕು ದಿನವಾದ ಸೋಮವಾರವನ್ನು ಕಪ್ಪು ದಿನವನ್ನಾಗಿ ಆಚರಿಸುವಂತೆ ಜಾಯಿಂಟ್ ರೆಸಿಸ್ಟೆಂಟ್ ಲೀಡರ್‌ಶಿಪ್ ಸಂಘಟನೆ (ಜೆಆರ್‌ಎಲ್) ಅಡಿಯಲ್ಲಿ ಪ್ರತ್ಯೇಕತವಾದಿಗಳು ಕರೆ ನೀಡಿದ್ದರು. ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎತ್ತಿ ತೋರಿಸಲು ಬಂದ್ ಆಚರಿಸುವಂತೆ ಸೈಯದ್ ಅಲಿ ಶಾಹ್ ಗಿಲಾನಿ, ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಅವರನ್ನು ಒಳಗೊಂಡ ಜೆಆರ್‌ಎಲ್ ಜನರಿಗೆ ಕರೆ ನೀಡಿತ್ತು. ಮಾನವ ಹಕ್ಕು ಉಲ್ಲಂಘನೆ ಪರಿಗಣಿಸುವಂತೆ ಹಾಗೂ ಹಿಂಸಾಚಾರ ನಿಲ್ಲಿಸಲು ಒತ್ತಡ ಹೇರುವಂತೆ ಅಂತರ್ ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳನ್ನು ಹೇಳಿಕೆಯಲ್ಲಿ ಜೆಆರ್‌ಎಲ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News