ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಕೇಂದ್ರ ನಕಾರ

Update: 2018-12-10 14:42 GMT

 ಬೆಂಗಳೂರು,ಡಿ.10: ಲಿಂಗಾಯತರು,ವೀರಶೈವರು ಮತ್ತು ಬಸವಣ್ಣನ ತತ್ತ್ವಗಳನ್ನು ಅನುಸರಿಸುವವರನ್ನು ಪ್ರತ್ಯೇಕ ಧರ್ಮವಾಗಿ ಘೋಷಿಸುವಂತೆ ಕೋರಿದ್ದ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿ ಕೇಂದ್ರ ಗೃಹ ಸಚಿವಾಲಯವು ಸೋಮವಾರ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಪತ್ರವನ್ನು ಸಲ್ಲಿಸಿದೆ.

1871ರಿಂದಲೇ ಲಿಂಗಾಯತರು ಮತ್ತು ವೀರಶೈವರನ್ನು ಹಿಂದುಗಳೆಂದು ವರ್ಗೀಕರಿಸಲಾಗಿದೆ ಮತ್ತು ಕರ್ನಾಟಕ ಸರಕಾರದ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಈ ಸಮುದಾಯದಲ್ಲಿ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಪಡೆಯುತ್ತಿರುವವರು ಅವುಗಳಿಂದ ವಂಚಿತರಾಗುತ್ತಾರೆ ಎಂದು ಸ್ಪಷ್ಟಪಡಿಸಿ ಕೇಂದ್ರ ಗೃಹ ಸಚಿವಾಲಯವು 2018,ಆ.24ರಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವನ್ನು ಬರೆದಿತ್ತು. ಲಿಂಗಾಯತ/ವೀರಶೈವರನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿದರೆ ಮತ್ತು ಹಿಂದುಗಳಿಂದ ಪ್ರತ್ಯೇಕವಾದ ಕೋಡ್ ನೀಡಿದರೆ ಈ ಧರ್ಮವನ್ನು ಪಾಲಿಸುತ್ತಿರುವ ಪರಿಶಿಷ್ಟ ಜಾತಿಗಳು ತಮ್ಮ ಎಸ್‌ಸಿ ಸ್ಥಾನಮಾನಗಳನ್ನು ಮತ್ತು ಸೌಲಭ್ಯಗಳನ್ನು ಕಳೆದುಕೊಳ್ಳುತ್ತವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸೋಮವಾರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ ಅವರು,ಕೇಂದ್ರ ಸರಕಾರವು ರಾಜ್ಯ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ತಿಳಿಸಿದರು. ಇದನ್ನು ಸ್ಪಷ್ಟಪಡಿಸಿ ಅಧಿಸೂಚನೆಯೊಂದನ್ನು ನ.13ರಂದು ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.

 ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ಲಿಂಗಾಯತರ ಬೇಡಿಕೆಯನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸಮಿತಿಯೊಂದನ್ನು ರಚಿಸಿರುವುದನ್ನು ಶಶಿಧರ ಶ್ಯಾನಭೋಗ್ ಮತ್ತು ಇತರರು ಪಿಐಎಲ್‌ನಲ್ಲಿ ಪ್ರಶ್ನಿಸಿದ್ದರು. ಆಯೋಗಕ್ಕೆ ಇಂತಹ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದರು.

ಕೇಂದ್ರದ ಹೇಳಿಕೆಯ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲ ಎಸ್.ಜಿ.ಗುರುಮಠ ಅವರು,ವಾದಿಗಳು ತಾವು ದಾಖಲಿಸಿರುವ ಪಿಐಎಲ್‌ನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಮುಖ್ಯ ನ್ಯಾಯಾಧೀಶ ದಿನೇಶ ಮಹೇಶ್ವರಿ ಮತ್ತು ನ್ಯಾ.ಬಿ.ಎಂ. ಶ್ಯಾಮಪ್ರಸಾದ ಅವರು ಪ್ರಕರಣವನ್ನು ವಜಾಗೊಳಿಸಿದರು.

ಇದೊಂದು ತಾತ್ಕಾಲಿಕ ಹಿನ್ನಡೆಯಷ್ಟೇ. ಲಿಂಗಾಯತ ವಿಷಯವನ್ನು ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಅಜೆಂಡಾದ ಭಾಗವಾಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅಗತ್ಯವಾದರೆ ನ್ಯಾಯವನ್ನು ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುತ್ತೇವೆ. ಪ್ರತ್ಯೇಕ ಧರ್ಮವಾಗಿ ಗುರುತಿಸಿಕೊಳ್ಳಲು ಜೈನರು ನಡೆಸಿದ ಹೋರಾಟಗಳು ನಮಗೆ ಗೊತ್ತು. ಅಗತ್ಯವಾದರೆ ತಮ್ಮ ಅನನ್ಯತೆ ಮತ್ತು ಹಕ್ಕುಗಳಿಗಾಗಿ ತಮ್ಮ ರಾಜ್ಯ ಸರಕಾರಗಳೊಂದಿಗೆ ಹೋರಾಡುತ್ತಿರುವ ಪಟೇಲ್ ಮತ್ತು ಜಾಟ್ ಸಮುದಾಯಗಳ ನಾಯಕರೊಂದಿಗೂ ನಾವು ಕೈಜೋಡಿಸುತ್ತೇವೆ ಎಂದು ವಿಶ್ವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಂಜಯ ಮಾಕಾಲ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬಸವ ತತ್ತವನ್ನು ಅನುಸರಿಸುವ ಲಿಂಗಾಯತರು ಮತ್ತು ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ನ್ಯಾ.ನಾಗಮೋಹನ ದಾಸ್ ಸಮಿತಿಯ ಶಿಫಾರಸನ್ನು ಈ ವರ್ಷದ ಮಾರ್ಚ್‌ನಲ್ಲಿ ರಾಜ್ಯ ಸರಕಾರವು ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News