ಗಜ ಚಂಡಮಾರುತದಿಂದ ನಿರ್ವಸಿತನಾಗಿದ್ದ ಕೃಷಿ ಕಾರ್ಮಿಕ ಆತ್ಮಹತ್ಯೆ

Update: 2018-12-10 16:45 GMT

ತಂಜಾವೂರು,ಡಿ.10: ಕಳೆದ ತಿಂಗಳು ತಮಿಳುನಾಡು ಕರಾವಳಿಯನ್ನು ಅಪ್ಪಳಿಸಿದ್ದ ಗಜ ಚಂಡಮಾರುತದಿಂದಾಗಿ ತನ್ನ ಮನೆಯನ್ನು ಕಳೆದುಕೊಂಡಿದ್ದ ತಂಜಾವೂರು ಜಿಲ್ಲೆಯ ಕೃಷಿಕಾರ್ಮಿಕ ಪಾಂಡಿಯನ್(38) ಎಂಬಾತ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಚೀಟಿ ಲಭ್ಯವಾಗಿಲ್ಲವಾದರೂ,ಮನೆಯನ್ನು ಕಳೆದುಕೊಂಡ ಬಳಿಕ ಪಾಂಡಿಯನ್ ಖಿನ್ನನಾಗಿದ್ದ ಮತ್ತು ಇದೇ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಗಳು ಬೆಟ್ಟು ಮಾಡಿವೆ.

ಪಾಂಡಿಯನ್ ತನ್ನ ಕುಟುಂಬದಲ್ಲಿ ಏಕೈಕ ದುಡಿಯುವ ವ್ಯಕ್ತಿಯಾಗಿದ್ದ. ಅವಿವಾಹಿತನಾಗಿದ್ದ ಆತ ತಾಯಿಯ ನಿಧನದ ಬಳಿಕ ತನ್ನ ತಂದೆಯೊಂದಿಗೆ ವಾಸವಾಗಿದ್ದ. ಆತನ ಅಣ್ಣ ತನ್ನ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸವಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಗಜ ಚಂಡಮಾರುತದಿಂದಾಗಿ 63 ಜನರು ಸಾವನ್ನಪ್ಪಿದ್ದು,ಮೂರು ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆಗಳನ್ನು ಮತ್ತು ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ತಂಜಾವೂರು ಮತ್ತು ಪುದುಕೊಟ್ಟೈಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News