​ಡಿ. 25-29: ಕುಂದಾಪುರದಲ್ಲಿ 18ನೇ ಕುವೆಂಪು ನಾಟಕೋತ್ಸವ

Update: 2018-12-11 16:19 GMT

ಉಡುಪಿ, ಡಿ.11: ಬೆಂಗಳೂರಿನ ಮಕ್ಕಳ ರಂಗಶಾಲೆ ‘ರಂಗಕಹಳೆ’, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆಶ್ರಯದಲ್ಲಿ 18ನೇ ಕುವೆಂಪು ನಾಟಕೋತ್ಸವ ವನ್ನು ಡಿ.25ರಿಂದ 19ರವರೆಗೆ ಭಂಡಾರ್ಕಾರ್ಸ್ ಕಾಲೇಜಿನ ಡಾ.ಎಚ್. ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಆಯೋಜಿಸಲಿದೆ ಎಂದು ನಾಟಕೋತ್ಸವದ ಸಂಚಾಲಕ ಓಹಿಲೇಶ ಲಕ್ಷ್ಮಣ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಮಾನವತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕುವೆಂಪು ಅವರ ಜನ್ಮದಿನೋತ್ಸವದ ಸವಿ ನೆನಪಿನಲ್ಲಿ ಅವರ 10 ನಾಟಕಗಳನ್ನು ಒಟ್ಟು ಐದು ದಿನಗಳ ನಾಟಕೋತ್ಸವದಲ್ಲಿ ಉಚಿತವಾಗಿ ಪ್ರದರ್ಶಿಸಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಹಾಗೂ ಕುಂದಾಪುರದಲ್ಲಿ ಮೊದಲ ಬಾರಿ ನಡೆಯುವ ಕುವೆಂಪು ನಾಟಕೋತ್ಸವದಲ್ಲಿ ಪ್ರತಿದಿನ ತಲಾ ಎರಡು ನಾಟಕಗಳನ್ನು ಪ್ರದರ್ಶಿಸಲಾಗುವುದು. ಪ್ರತಿದಿನ ಸಂಜೆ 6 ಗಂಟೆಗೆ ಪ್ರದರ್ಶನ ಆರಂಭಗೊಳ್ಳಲಿದೆ. ನಾಟಕೋತ್ಸವದ ಯಶಸ್ಸಿಗಾಗಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ಯಲ್ಲಿ ನಾಟಕೋತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದು ಓಹಿಲೇಶ ಲಕ್ಷ್ಮಣ್ ತಿಳಿಸಿದ್ದಾರೆ.

ಡಿ.25ರಂದು ಸಂಜೆ 6 ಗಂಟೆಗೆ ನಾಟಕೋತ್ಸವದ ಉದ್ಘಾಟನೆ ನಡೆಯಲಿದ್ದು, ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ ಅಲ್ಲದೇ ಖ್ಯಾತ ಸಾಹಿತಿ ಹಂ.ಪ.ನಾಗರಾಜಯ್ಯ ಹಾಗೂ ಕಡಿದಾಳ್‌ಪ್ರಕಾಶ್ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದವರು ನುಡಿದರು.

ಡಿ.25ರ ಮೊದಲ ದಿನ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಹಾಗೂ ಮೋಡಣ್ಣನ ತಮ್ಮ, ಡಿ.26ರಂದು ನನ್ನ ಗೋಪಾಲ ಮತ್ತು ಜಲಗಾರ, 27ರಂದು ಯಮನ ಸೋಲು ಮತ್ತು ನನ್ನ ಗೋಪಾಲ (ಚಲನಚಿತ್ರ), 28ರಂದು ಬಾಲಕ ಕುವೆಂಪು ಮತ್ತು ಶೂದ್ರತಪಸ್ವಿ ಹಾಗೂ ಡಿ.29ರಂದು ಸ್ಮಶಾನ ಕುರುಕ್ಷೇತ್ರ ಮತ್ತು ದಶಾನನ ಸ್ವಪ್ನಸಿದ್ಧಿ ಪ್ರದರ್ಶನಗೊಳ್ಳಲಿದೆ. ನಾಡಿನ ವಿವಿಧ ರಂಗತಂಡಗಳು ಈ ನಾಟಕಗಳನ್ನು ಪ್ರದರ್ಶಿಸಲಿವೆ ಎಂದರು.

ಕುವೆಂಪು ಅವರ ವಿಶ್ವ ಮಾನವ ಸಂದೇಶ ಸಾರುವ ನಾಟಕಗಳು ದೇಶಾದ್ಯಂತ ಎಲ್ಲರಿಗೂ ತಲುಪಬೇಕೆಂಬ ಉದ್ದೇಶದಿಂದ ರಂಗಕಹಳೆ ಪ್ರತಿ ವರ್ಷ ಮಕ್ಕಳ ನಾಟಕೋತ್ಸವದೊಂದಿಗೆ ಕುವೆಂಪು ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ ಕರ್ನಾಟಕದ 11 ಜಿಲ್ಲೆಗಳು ಸೇರಿದಂತೆ ಮುಂಬಯಿ, ಹೊಸದಿಲ್ಲಿ, ಮಧ್ಯಪ್ರದೇಶ, ಮೇಘಾಲಯ, ಕಾಸರಗೋಡುಗಳಲ್ಲಿ ಈ ಉತ್ಸವ ಗಳು ನಡೆದಿವೆ ಎಂದವರು ವಿವರಿಸಿದರು.

ಕುವೆಂಪು ನಾಟಕಗಳ ಜೊತೆಗೆ ಸಾಧಕರಿಗೆ ಗೌರವಾರ್ಪಣೆ, ವಿಚಾರ ಸಂಕಿರಣ, ಕಿರುಚಿತ್ರ, ಚಲನಚಿತ್ರಗಳ ಪ್ರದರ್ಶನವೂ ಇರುತ್ತವೆ ಎಂದು ಅವರು ಓಹಿಲೇಶ ಲಕ್ಷ್ಮಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಎಚ್.ಶಾಂತಾರಾಮ್, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಎನ್.ಪಿ. ನಾರಾಯಣ ಶೆಟ್ಟಿ, ಕಾಲೇಜಿನ ರಂಗಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಸಂತ ಬನ್ನಾಡಿ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News