‘ಎಲ್‌ಎಸ್‌ಡಿ’ ಮಾದಕ ವಸ್ತು ಮಾರಾಟ: ಇಬ್ಬರ ಬಂಧನ

Update: 2018-12-11 16:56 GMT

ಮಂಗಳೂರು, ಡಿ.11: ನಗರದ ನಾನಾ ಕಡೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದಲ್ಲದೆ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆಕಾಶ ಭವನ ನಿವಾಸಿ ಗೌತಮ್ ಯಾನೆ ಗೌತು (28), ದೇರೆಬೈಲು ಮಂದಾರಬೈಲು ನಿವಾಸಿ ಲಾಯ್‌ವೇಗಸ್ (26) ಬಂಧಿತ ಆರೋಪಿಗಳು.

ಮಂಗಳವಾರ ನಗರದ ಹೆರಿಟೇಜ್ ಕಟ್ಟಡದ ಎದುರಿನ ರಸ್ತೆ ಬದಿಯಲ್ಲಿ ಆರೋಪಿಗಳು ಎಲ್‌ಎಸ್‌ಡಿ ಎಂಬ ಮಾದಕ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕ ಕೆ.ಎಂ.ಶರೀಫ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ಅವರ ವಶದಲ್ಲಿದ್ದ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ದರೋಡೆ ಮಾಡಿದ್ದರು: ವಿಚಾರಣೆ ವೇಳೆ ಆರೋಪಿಗಳು ಡಿ. 5ರಂದು ನಗರದ ಫಳ್ನೀರ್ ಬ್ರಿಟ್ಟೊ ಲೇನ್ ನಿವಾಸಿ ಹಸನ್ ಶಿಮಾಕ್ ಎಂಬವರನ್ನು ಫಳ್ನೀರ್‌ನಿಂದ ಅಪಹರಿಸಿ ಹಲ್ಲೆ ಮಾಡಿ ಅವರ ಸ್ಕೂಟರ್, ನಗದು, ಮೊಬೈಲ್ ದರೋಡೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ 13,000 ರೂ. ಮೌಲ್ಯದ  ಎಲ್‌ಎಸ್‌ಡಿ ಎಂಬ ಮಾದಕ ವಸ್ತುವನ್ನು ಹಾಗೂ ದರೋಡೆ ಮಾಡಿದ ಮೊಬೈಲ್ ಹ್ಯಾಂಡ್ ಸೆಟ್, ಸ್ಕೂಟರ್, ನಗದು ಮತ್ತು ದರೋಡೆ ಕೃತ್ಯಕ್ಕೆ ಬಳಸಿದ ಕಾರು, ಚೂರಿ, ಕಬ್ಬಿಣದ ರಾಡ್ ಸೇರಿದಂತೆ 2,89,000ರೂ. ಮೌಲ್ಯದ ಸೊತ್ತುಗಳನ್ನು ದಕ್ಷಿಣ ಠಾಣೆ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ನಟೋರಿಯಸ್‌ಗಳು:  ಆರೋಪಿಗಳ ಪೈಕಿ ಗೌತಮ್ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ 1ಹಲ್ಲೆ, 1ಕೊಲೆ ಪ್ರಕರಣ ದಾಖಲಾಗಿದ್ದು, ಈತನ ಮೇಲೆ ದಾಖಲಾದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಈತ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾನೆ.
ಇನ್ನೊಬ್ಬ ಆರೋಪಿ ಲಾಯ್ ವೇಗಸ್ ಎಂಬಾತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ 2 ದರೋಡೆ ಯತ್ನ ಪ್ರಕರಣ, ಉತ್ತರ ಪೊಲೀಸ್ ಠಾಣೆಯಲ್ಲಿ 1 ದರೋಡೆ ಯತ್ನ, ಬರ್ಕೆ ಪೊಲೀಸ್ ಠಾಣೆಯಲ್ಲಿ 1, ಕೊಲೆ ಯತ್ನ, 2 ಹಲ್ಲೆ ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 1ಹಲ್ಲೆ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣಾ ನಿರೀಕ್ಷಕ ಕೆ.ಎಂ.ಶರೀಫ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಸಿದ್ದಾರೆ.

ಆರೋಪಿಗಳ ಪತ್ತೆಗೆ ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ ರವೀಶ್ ನಾಯಕ್ ಹಾಗೂ ಸಿಬ್ಬಂದಿ, ಮಂಗಳೂರು ಪೂರ್ವ ಠಾಣೆಯ ಪೊಲೀಸ್ ನಿರೀಕ್ಷಕ ಮಾರುತಿ ನಾಯಕ್, ಮಂಗಳೂರು ದಕ್ಷಿಣ ಠಾಣೆಯ ಪಿಎಸ್‌ಐ ರಾಜೇಂದ್ರ ಬಿ., ಮಂಜುಳಾ ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News