ಅದಮಾರು ಮಠ ಪರ್ಯಾಯ: ಡಿ.14ರಂದು ಬಾಳೆ ಮುಹೂರ್ತ

Update: 2018-12-12 16:39 GMT

 ಉಡುಪಿ, ಡಿ.12: 2020ರ ಜನವರಿ 18ರಂದು ನಡೆಯುವ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಮೊದಲು ನಡೆಯುವ ಪೂರ್ವಭಾವಿ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ, ಡಿ.14ರ ಬೆಳಗ್ಗೆ 8:40ಕ್ಕೆ ರಥಬೀದಿಯಲ್ಲಿರುವ ಅದಮಾರು ಮಠದ ಆವರಣದಲ್ಲಿ ನಡೆಯಲಿದೆ.

ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಬಾಳೆ ಮುಹೂರ್ತ ಮೊದಲನೇಯದು. ಇದಾದ ಬಳಿಕ ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಪರ್ಯಾಯಕ್ಕೆ ಸುಮಾರು ಒಂದು ತಿಂಗಳು ಮೊದಲು ಭತ್ತ ಮುಹೂರ್ತ ನಡೆಯಲಿವೆ.

ಬಾಳೆಗಿಡಗಳ ಜೊತೆಗೆ ತುಳಸಿ ಹಾಗೂ ಕಬ್ಬು ಗಿಡಗಳನ್ನು ಅಂದು ನೆಡಲಾಗುತ್ತದೆ. ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣನ ಪೂಜೆಗೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆಗೆ ಈ ಬಾಳೆಎಲೆಯನ್ನು ಬಳಸಲಾ ಗುತ್ತದೆ.

ಧ್ವೈತ ಮತದ ಸ್ಥಾಪಕರಾದ ಶ್ರೀಮಧ್ವಾಚಾರ್ಯರಿಂದ ಸ್ಥಾಪನೆಗೊಂಡು 800 ವರ್ಷಗಳ ಇತಿಹಾಸವಿರುವ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳ ಪರ್ಯಾಯ ಆರಂಭಗೊಂಡಿದ್ದು 1552ರಲ್ಲಿ ಸೋದೆ ಮಠದ ಶ್ರೀವಾದಿರಾಜ ತೀರ್ಥರಿಂದ. ಇದಕ್ಕೆ ಮೊದಲು ಮಧ್ವಾಚಾರ್ಯರು ಶ್ರೀಕೃಷ್ಣನ ಪೂಜೆಗಾಗಿ ಎಂಟು ಮಠಗಳನ್ನು ಸ್ಥಾಪಿಸಿ ಪ್ರತಿ ಮಠಾಧೀಶರಿಗೂ ಎರಡು ತಿಂಗಳ ಅವಧಿಯ ಸರತಿ ಪೂಜೆ ವ್ಯವಸ್ಥೆ ಕಲ್ಪಿಸಿದ್ದರು.

ಅಂದಿನಿಂದ ಇಂದಿನವರೆಗೆ ಪಲಿಮಾರು ಮಠದಿಂದ ಪ್ರಾರಂಭಗೊಳ್ಳುವ ಪರ್ಯಾಯದ ಒಂದು ಚಕ್ರ ಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಹಾಗೂ ಪೇಜಾವರ ಮಠದ ಪರ್ಯಾಯದೊಂದಿಗೆ (ಒಟ್ಟು 16 ವರ್ಷ)ಮುಕ್ತಾಯಗೊಳ್ಳುತ್ತದೆ.

2018ರಜ.18ರಂದು ಪಲಿಮಾರು ಪರ್ಯಾಯದೊಂದಿಗೆ ಪರ್ಯಾಯದ 32ನೇ ಚಕ್ರ ಪ್ರಾರಂಭಗೊಂಡಿದೆ. ದ್ವೈವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆಯಲ್ಲಿ ಈಗ ನಡೆದಿರುವುದು 249ನೇಯದಾಗಿದ್ದು, ಅದಮಾರು ಪರ್ಯಾಯದೊಂದಿಗೆ 250ನೇ ಪರ್ಯಾಯ ಪೂಜೆಯೂ ಆರಂಭ ಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News