ಆದಿತ್ಯಾನಾಥ್ ರನ್ನು ಹೊಗಳಿ, ಮೋದಿಗೆ ಅವಮಾನ: ಕೇಸರಿ ಸಂಘಟನೆಯ ಕಾರ್ಯಕರ್ತರ ಬಂಧನ

Update: 2018-12-13 15:54 GMT

ಲಖ್ನೊ,ಡಿ.13: ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿ ಆದಿತ್ಯನಾಥ್ ನಮ್ಮ ಮುಂದಿನ ಪ್ರಧಾನಿ ಎಂದು ಬರೆಯಲಾಗಿದ್ದ ಫಲಕಗಳನ್ನು ಹಾಕಿದ ಕಾರಣಕ್ಕೆ ಕೇಸರಿ ಸಂಘಟನೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಹಿಂದು ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸುಳ್ಳು ಭರವಸೆಯ ಹೆಸರೇ ಮೋದಿ, ಹಿಂದುತ್ವದ ಬ್ರಾಂಡ್ ಯೋಗಿ” ಎಂದು ಬರೆಯಲಾಗಿದ್ದ ಅನೇಕ ಫಲಕಗಳನ್ನು ಉತ್ತರ ಪ್ರದೇಶ ನವನಿರ್ಮಾಣ ಸೇನೆಯು ನಗರದ ಹೃದಯ ಭಾಗದಲ್ಲಿ ಹಾಕಿತ್ತು. ಇದನ್ನು ಗಮನಿಸಿದ ಪೊಲೀಸರು ಸಂಘಟನೆಯ ವಿರುದ್ಧ ಸಾರ್ವಜನಿಕ ಸಂಪತ್ತಿಗೆ ಹಾನಿ ಮತ್ತು ಶಾಂತಿ ಕದಡಲು ಪ್ರಯತ್ನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಈ ಫಲಕಗಳನ್ನು ಮುದ್ರಿಸಲು ಬಳಸಲಾದ ಕಂಪ್ಯೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘಟನೆಯ ಮುಖ್ಯಸ್ಥ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಇತ್ತೀಚೆಗೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ ಮತ್ತು ಮಿಝೊರಾಂನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲು ಪ್ರಧಾನಿ ಮೋದಿಯೇ ಕಾರಣ ಎಂದು ಹೇಳಲಾಗಿದೆ. ಈ ವಿಡಿಯೊವನ್ನು ಗಂಭೀರವಾಗಿ ಪರಗಣಿಸಿರುವ ಉತ್ತರ ಪ್ರದೇಶ ಬಿಜೆಪಿ, ಇದು ಪಕ್ಷದಲ್ಲಿ ಬಿರುಕು ಮೂಡಿಸಲು ಮಾಡಿರುವ ಹುನ್ನಾರವಾಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News