ಮೂರು ರಾಜ್ಯಗಳಲ್ಲಿ ಹಿನ್ನಡೆಯ ಪರಾಮರ್ಶೆ: ಬಿಜೆಪಿ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ ಅಮಿತ್ ಶಾ

Update: 2018-12-13 16:26 GMT

ಹೊಸದಿಲ್ಲಿ, ಡಿ.13: ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಆಗಿರುವ ಸೋಲಿನ ಪರಾಮರ್ಶೆ ನಡೆಸಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಹಿರಿಯ ಮುಖಂಡರೊಂದಿಗೆ ಗುರುವಾರ ಸಭೆ ನಡೆಸಿ ಚರ್ಚಿಸಿದರು.

ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಈ ಸಭೆಯ ಬಗ್ಗೆ ನಿರ್ಧರಿಸಲಾಗಿದೆ ಎಂದು ಬಿಜೆಪಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಘಟಕದ ಅಧ್ಯಕ್ಷರು, ವಿವಿಧ ರಾಜ್ಯಗಳ ಉಸ್ತುವಾರಿಗಳು ಹಾಗೂ ಆಹ್ವಾನಿತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಆಡಳಿತವಿದ್ದ ಮೂರು ಹಿಂದಿ ಕೇಂದ್ರ ಪ್ರದೇಶಗಳಲ್ಲಿ ಪಕ್ಷಕ್ಕೆ ಆಗಿರುವ ಸೋಲಿನ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.

ಮುಂಬರುವ ಲೋಕಸಭಾ ಚುನಾವಣೆಗೆ ನಡೆಸಿರುವ ಸಿದ್ಧತೆಯ ಪರಾಮರ್ಶೆ ನಡೆಸಲಾಯಿತು ಎಂದವರು ತಿಳಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯ ಮಿತಿಯನ್ನು ಈ ಫಲಿತಾಂಶ ಬಹಿರಂಗಗೊಳಿಸಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಪಕ್ಷ 15 ವರ್ಷದಿಂದ ಅಧಿಕಾರದಲ್ಲಿದ್ದರೂ ರೈತರ ಸಮಸ್ಯೆಯ ಬಗ್ಗೆ ಸೂಕ್ತ ರೀತಿಯಲ್ಲಿ ಗಮನ ಹರಿಸಲು ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸಲು ವಿಫಲರಾಗಿರುವುದು ಫಲಿತಾಂಶದಿಂದ ವ್ಯಕ್ತವಾಗಿದೆ. ಅಲ್ಲದೆ ಹೆಚ್ಚು ಆಕ್ರಮಣಕಾರಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡುವ ಸವಾಲು ಈಗ ಎದುರಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪಕ್ಷವೊಂದರ ಯಶಸ್ಸು ಅಥವಾ ವೈಫಲ್ಯವು ಆ ಪಕ್ಷ ಸಂಘಟನಾತ್ಮಕವಾಗಿ ಯಾವ ರೀತಿ ಸಿದ್ಧಗೊಂಡಿದೆ ಎಂಬುದನ್ನು ಅವಲಂಬಿಸಿಲ್ಲ ಎಂದು ಮಂಗಳವಾರದ ಫಲಿತಾಂಶ ಸಾಬೀತುಗೊಳಿಸಿದೆ. ಇನ್ನೂ ಕೆಲವು ನಿರ್ಣಾಯಕ ವಿಷಯಗಳಿದ್ದು ಈ ಬಗ್ಗೆ ಬಿಜೆಪಿ ಗಮನಹರಿಸಬೇಕಿದೆ ಎಂದು ‘ಸೆಂಟರ್ ಫಾರ್ ರಿಫಾರ್ಮ್ಸ್, ಡೆವಲಪ್‌ಮೆಂಟ್ ಆ್ಯಂಡ್ ಜಸ್ಟಿಸ್’ನ ಅಧ್ಯಕ್ಷ ಸಿದ್ಧಾರ್ಥ್ ಮಿಶ್ರ ಹೇಳಿದ್ದಾರೆ. ಗುರುವಾರ ಬೆಳಿಗ್ಗೆ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದರು. 2019ರ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಜನವರಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದಿಲ್ಲಿಯಲ್ಲಿ ನಡೆಯುವ ನಿರೀಕ್ಷೆಯಿದ್ದು ಇದರಲ್ಲಿ ಪಕ್ಷದ 2 ಸಾವಿರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್, ಬಿಜೆಪಿಯ ಸೋಲು ಸಂಘಟನಾತ್ಮಕ ವೈಫಲ್ಯದ ವಿಷಯವಲ್ಲ, ಇದು ಕಾರ್ಯನೀತಿಯ ವೈಫಲ್ಯವಾಗಿದೆ. ಪ್ರಭುತ್ವ ಎಂದರೆ ಆಡಳಿತ ನಡೆಸುವುದಷ್ಟೇ ಅಲ್ಲ, ಉತ್ತಮ ವೈದ್ಯರಂತೆ ಜನತೆಯ ನಾಡಿಮಿಡಿತವನ್ನು ಅರಿಯುವ ಜಾಣ್ಮೆಯೂ ಇರಬೇಕು. ಈ ಜಾಣ್ಮೆಗೆ ಪ್ರಚಾರ ಪರ್ಯಾಯವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News