ಆನ್‌ಲೈನ್ ಔಷಧಿ ಮಾರಾಟಕ್ಕೆ ದಿಲ್ಲಿ ಹೈಕೋರ್ಟ್ ತಡೆ

Update: 2018-12-13 16:53 GMT

ಹೊಸದಿಲ್ಲಿ,ಡಿ.13: ಇ-ಔಷಧಿ ಕಂಪೆನಿಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರ ಮೇಲೆ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಡೆ ವಿಧಿಸಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ಮತ್ತು ಫಾರ್ಮಸಿ ಕಾಯ್ದೆ 1948 ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿರುವ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಬೇಕೆಂದು ಕೋರಿ ಡಾ. ಝಹೀರ್ ಅಹಮದ್ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾಯಾಧೀಶ ವಿ.ಕಾಮೇಶ್ವರ ರಾವ್ ಅವರ ನ್ಯಾಯಾಲಯ ಪೀಠ ಈ ನಿರ್ದೇಶನವನ್ನು ನೀಡಿದೆ. ಅಕ್ಟೋಬರ್ 6ರಂದು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಬಗ್ಗೆ, ಕೇಂದ್ರ, ದಿಲ್ಲಿ ಸರಕಾರ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹಾಗೂ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಲ್ಲಿ ಪ್ರತಿಕ್ರಿಯೆಯನ್ನು ಕೇಳಿತ್ತು.

ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರಿಂದ ಔಷಧ ಗೀಳು ಮತ್ತು ದುರ್ಬಳಕೆ ಹೆಚ್ಚಾಗುತ್ತದೆ. ಈಗಾಗಲೇ ಆನ್‌ಲೈನ್‌ನಲ್ಲಿ ಎಲ್ಲ ಆದೇಶ, ಕಾನೂನುಗಳನ್ನು ಉಲ್ಲಂಘಿಸಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ವಚಿಕಿತ್ಸೆ ಮಾಡುವ, ವೈದ್ಯರ ಚೀಟಿಯಿಲ್ಲದೆ ಔಷಧ ಪಡೆಯುವ ಅಪಾಯ ಹೆಚ್ಚಾಗಲಿದೆ. ಜೊತೆಗೆ ಮಾನಸಿಕ ರೋಗಗಳಿಗೆ ಸಂಬಂಧಪಟ್ಟ ಔಷಧಗಳನ್ನು ಖರೀದಿಸುವ ಪ್ರಮಾಣ ಹೆಚ್ಚಾಗಲಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅರ್ಜಿಯ ಮುಂದಿನ ವಿಚಾರಣೆಯನ್ನು 2019ರ ಮಾರ್ಚ್ 25ಕ್ಕೆ ಮುಂದೂಡಲಾಗಿದೆ. ಸದ್ಯ ಭಾರತದಲ್ಲಿ ಇ-ಫಾರ್ಮಸಿ ವ್ಯವಹಾರವನ್ನು ನಿಯಂತ್ರಿಸುವ ಯಾವುದೇ ಕಾನೂನು ರಚನೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News