×
Ad

‘ಹೈದರ್’ ಚಿತ್ರದಲ್ಲಿ ನಟಿಸಿದ್ದ ಬಾಲಕ ಉಗ್ರಗಾಮಿಯಾಗಿ ಎನ್‌ಕೌಂಟರ್‌ಗೆ ಬಲಿ

Update: 2018-12-13 22:29 IST

ಶ್ರೀನಗರ,ಡಿ.13: ಉತ್ತಮ ರಂಗನಟನಾಗಿದ್ದ,ಬಾಲಿವುಡ್ ಚಿತ್ರ ‘ಹೈದರ್’ನಲ್ಲಿ ಪುಟ್ಟ ಪಾತ್ರವೊಂದನ್ನೂ ಮಾಡಿದ್ದ ಹಾಜಿನ್ ಬಂಡಿಪೋರಾದ ಬಾಲಕ ನಂತರ ಉಗ್ರಗಾಮಿಯಾಗಿ ಬದಲಾಗಿದ್ದು, ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

 ಸಾಕಿಬ್ ಬಿಲಾಲ್ ಮತ್ತು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಇನ್ನೋರ್ವ ಬಾಲಕ ಆ.31ರಂದು ತಮ್ಮ ಮನೆಗಳಿಂದ ಹೊರಬಿದ್ದವರು ಬಳಿಕ ವಾಪಸ್ ಬಾರದೇ ನಾಪತ್ತೆಯಾಗಿದ್ದರು. ಇವರಿಬ್ಬರೂ ಮೂರನೆಯ ವ್ಯಕ್ತಿ ಚಲಾಯಿಸುತ್ತಿದ್ದ ಬೈಕಿನಲ್ಲಿ ಕುಳಿತುಕೊಂಡು ಪ್ರಯಾಣಿಸಿದ್ದನ್ನು ಕೆಲವರು ಕಂಡಿದ್ದರು. ಡಿ.9ರಂದು ಶ್ರೀನಗರದ ಹೊರವಲಯದಲ್ಲಿರುವ ಮುಜ್ಗುಂದ್‌ನಲ್ಲಿ ಭದ್ರತಾ ಪಡೆಗಳೊಂದಿಗಿನ 18 ಗಂಟೆಗಳ ಗುಂಡಿನ ಕಾಳಗಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೈಬಾ ಉಗ್ರನೊಂದಿಗೆ ಈ ಇಬ್ಬರು ಬಾಲಕರೂ ಕೊಲ್ಲಲ್ಪಟ್ಟಿದ್ದಾರೆ.

ಬಿಲಾಲ್ ಉಗ್ರಗಾಮಿಯಾಗಿದ್ದು ಏಕೆ ಎನ್ನುವುದು ಆತನ ಕುಟುಂಬಕ್ಕೆ ಅರ್ಥವಾಗಿಲ್ಲ. ಆತನಿಗಾಗಿ ಕುಟುಂಬದವರು ಎಲ್ಲ ಕಡೆ ಹುಡುಕಾಡಿದ್ದರು.ಆತ ಇಂಜಿನಿಯರ್ ಆಗಬೇಕೆಂದು ಬಯಸಿದ್ದ. ಆತ ಉಗ್ರರೊಂದಿಗೆ ಸೇರಿದ್ದು ಏಕೆ ಎನ್ನುವುದು ನಮಗೆ ಗೊತ್ತಾಗಿಲ್ಲ ಎಂದು ಬಿಲಾಲ್‌ನ ಸೋದರಮಾವ ಆಸಿಂ ಎಜಾಝ್ ಹೇಳಿದರು.

10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದ ಬಿಲಾಲ್ 11ನೇ ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದ. ಫುಟ್ಬಾಲ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಆತ ಟೀಕ್ವೊಂಡೊ ಮತ್ತು ಕಬಡ್ಡಿಯನ್ನೂ ಆಡುತ್ತಿದ್ದ. ಬಿಲಾಲ್ ಶ್ರೀಮಂತ ಕೃಷಿ ಕುಟುಂಬಕ್ಕೆ ಸೇರಿದ್ದರೆ ಆತನೊಂದಿಗೆ ಸಾವನ್ನಪ್ಪಿರುವ ಇನ್ನೋರ್ವ ಬಾಲಕ ಬಡ ಕುಟುಂಬದವನಾಗಿದ್ದ.

ನಟನೆಯಲ್ಲಿ ಆಸಕ್ತಿ ಹೊಂದಿದ್ದ ಬಿಲಾಲ್ ಆರನೇ ತರಗತಿಯಲ್ಲಿದ್ದಾಗ ‘ಹೈದರ್’ ಚಿತ್ರದ ಎರಡು ಕಿರುದೃಶ್ಯಗಳಲ್ಲಿ ನಟಿಸಿದ್ದ. ಅದಕ್ಕೂ ಮೊದಲು ನಾಟಕವೊಂದರಲ್ಲಿನ ತನ್ನ ನಟನೆಗಾಗಿ ಪ್ರಶಸ್ತಿಯನ್ನು ಪಡೆದಿದ್ದ ಆತ ಅದರ ಪುನರಾವರ್ತನೆಗಾಗಿ ಒಡಿಶಾಗೂ ತೆರಳಿದ್ದ ಎಂದು ಎಜಾಝ್ ತಿಳಿಸಿದರು.

ಮನೆಯಿಂದ ನಾಪತ್ತೆಯಾದ ಬೆನ್ನಿಗೇ ಈ ಇಬ್ಬರೂ ಬಾಲಕರು ಉಗ್ರಗಾಮಿಗಳನ್ನು ಸೇರಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News