ರಫೇಲ್ ಒಪ್ಪಂದದ ತನಿಖೆ ಕುರಿತು ನಾಳೆ ಸುಪ್ರೀಂ ತೀರ್ಪು
ಹೊಸದಿಲ್ಲಿ,ಡಿ.13: ಭಾರತವು ಫ್ರಾನ್ಸ್‌ನೊಂದಿಗೆ ಮಾಡಿಕೊಂಡಿರುವ ಬಹು ಮಿಲಿಯ ಡಾಲರ್‌ಗಳ ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುರಿತು ನ್ಯಾಯಾಲಯದ ನಿಗಾದಲ್ಲಿ ತನಿಖೆಯನ್ನು ಕೋರಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಪ್ರಕಟಿಸಲಿದೆ.
ನ.14ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಈ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ವಕೀಲ ಎಂ.ಎಲ್.ಶರ್ಮಾ ಅವರು ಪ್ರಕರಣದಲ್ಲಿ ಮೊದಲ ಅರ್ಜಿದಾರರಾಗಿದ್ದು,ಬಳಿಕ ಇನ್ನೋರ್ವ ವಕೀಲ ವಿನೀತ್ ಧಂಡಾ ಅವರೂ ನ್ಯಾಯಾಲಯದ ನಿಗಾದಡಿ ತನಿಖೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಆಪ್ ನಾಯಕ ಸಂಜಯ್ ಸಿಂಗ್ ಕೂಡ ಅವರನ್ನು ಅನುಸರಿಸಿದ್ದರು. ಬಳಿಕ ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಹಾಗೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಜಂಟಿಯಾಗಿ ಅರ್ಜಿ ಸಲ್ಲಿಸಿ ಒಪ್ಪಂದದಲ್ಲಿಯ ಅಕ್ರಮಗಳ ಆರೋಪಗಳ ಕುರಿತು ಎಫ್‌ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.