ಶ್ರೀಕೃಷ್ಣ ಮಠ ಇತಿಹಾಸದ 250ನೇ ಪರ್ಯಾಯಕ್ಕೆ ಪೂರ್ವಸಿದ್ಧತೆ ಪ್ರಾರಂಭ

Update: 2018-12-14 09:34 GMT

ಉಡುಪಿ, ಡಿ.14: 2020ರ ಜನವರಿ 18ರ ಮುಂಜಾನೆ ನಡೆಯುವ ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಇಂದು ಬೆಳಗ್ಗೆ 9:05ಕ್ಕೆ ರಥಬೀದಿಯಲ್ಲಿರುವ ಅದಮಾರು ಮಠದ ಆವರಣದಲ್ಲಿ ನಡೆಯಿತು.

ಉಡುಪಿಯಲ್ಲಿರುವ ಅಷ್ಟಮಠಗಳ ನಡುವೆ ಶ್ರೀಕೃಷ್ಣನ ಪೂಜೆಗೆ ದ್ವೈವಾರ್ಷಿಕ ಪರ್ಯಾಯ ಸಂಪ್ರದಾಯ ಪ್ರಾರಂಭಗೊಂಡ ನಂತರ ಈಗ ನಡೆದಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರ ಪರ್ಯಾಯ 32ನೇ ಚಕ್ರದ ಮೊದಲ (ಅಂದರೆ 249ನೇ) ಪರ್ಯಾಯವಾಗಿದ್ದು, ಮುಂದೆ ನಡೆಯುವ ಅದಮಾರು ಮಠದ ಪರ್ಯಾಯ ಶ್ರೀಕೃಷ್ಣ ಮಠದ ಇತಿಹಾಸ 250ನೇ ಪರ್ಯಾಯವಾಗಿ ದಾಖಲಾಗಲಿದೆ.

ಅದಮಾರು ಮಠದ ಉಭಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಬಾಳೆ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ವಿವಿಧ ಪಕ್ಷಗಳ ರಾಜಕೀಯ ನಾಯಕರು ಸೇರಿದಂತೆ ಅನೇಕ ಮಂದಿ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ನವಗ್ರಹ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಗೋಶಾಲೆ, ಗುರುಗಳ ಬೃಂದಾವನಗಳಲ್ಲಿ ಪ್ರಾರ್ಥಿಸಲಾಯಿತು. ಅನಂತರ ಶ್ರೀಮಠಕ್ಕೆ ಮರಳಿ ಬಾಳೆಗಿಡ, ತುಳಸಿ, ಕಬ್ಬುಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಬಂದು ಅದಮಾರು ಮಠದ ಜಾಗದಲ್ಲಿ ಬಾಳೆಗಿಡ, ತುಳಸಿ ಹಾಗೂ ಕಬ್ಬಿನ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.

ಈ ಬಾರಿ ಅದಮಾರು ಮಠದ ಆನಂದ ಸಮಿತಿ ಹಾಗೂ ಹೆಬ್ರಿ ಸಮೀಪದ ಚಾರದ ಗ್ರಾಮಸ್ಥರು ಹಾಗೂ ಅಲ್ಲಿನ ವಿವೇಕಾನಂದ ವೇದಿಕೆಯ ಯುವ ಸದಸ್ಯರು ಊರಿನಿಂದ ತಂದ ಬಾಳೆಗಿಡದೊಂದಿಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಒಟ್ಟು 108 ಗುಂಡಿಗಳಲ್ಲಿ ಬಾಳೆ ಹಾಗೂ ಇತರ ಗಿಡಗಳನ್ನು ನೆಟ್ಟರು.

ತಮ್ಮ ಪರ್ಯಾಯಾವಧಿಯಲ್ಲಿ ಅನ್ನದಾನವೂ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವ ಬಾಳೆಎಲೆ ಹಾಗೂ ತುಳಸಿಯನ್ನು ಸ್ವಾಮೀಜಿ ಇಲ್ಲಿಂದಲೇ ಪಡೆಯುವ ಸಂಪ್ರದಾಯವಿದೆ. ಅದಮಾರು ಮಠಕ್ಕಾಗಿ ಚಾರದ ಸುಮಾರು 10 ಎಕರೆ ಪ್ರದೇಶದಲ್ಲಿ ಬಾಳೆಗಿಡವನ್ನು ಬೆಳೆದು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

ಪರ್ಯಾಯ ಪೂರ್ವ ಸಿದ್ಧತೆಯ ಎರಡನೇ ಕಾರ್ಯಕ್ರಮವಾಗಿ ಜ.30 ರಂದು ಅಕ್ಕಿ ಮುಹೂರ್ತ ನಡೆಯಲಿದೆ. ಮುಂದೆ ಇದೇ ಸರಣಿಯಲ್ಲಿ ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿವೆ.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು, ಅದಮಾರು ಮಠದ ಮುಂದಿನ ಪರ್ಯಾಯಕ್ಕೆ ಊರಿನ ಸಮಸ್ತರ ಹಾಗೂ ಮಠದ ಭಕ್ತರು ಅಭಿಮಾನಿಗಳ ಸರ್ವ ಸಹಕಾರವನ್ನು ಕೋರಿದರು.

ಅದಮಾರು ಮಠದಿಂದ ಯಾರು ಸರ್ವಜ್ಞ ಪೀಠ ಏರುತ್ತಾರೆ ಎಂಬ ಬಗ್ಗೆ ಭಕ್ತಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಕುತೂಹಲವಿರುವುದನ್ನು ಪ್ರಸ್ತಾಪಿಸಿದ ಸ್ವಾಮೀಜಿ, ಇಂದೂ ಸ್ಪಷ್ಟ ಉತ್ತರ ನೀಡದೇ ನಾವಿಬ್ಬರೂ ಸೇರಿ ಮುಂದಿನ ಪರ್ಯಾಯವನ್ನು ನಡೆಸುತ್ತೇವೆ. ನಮ್ಮ ಈ ಬಾರಿಯ ಪರ್ಯಾಯದಲ್ಲಿ ಯಾವುದೇ ಹೊಸ ಯೋಜನೆಗಳಿರುವುದಿಲ್ಲ. ‘ಭಕ್ತರ ತೃಪ್ತಿ, ಭಗವಂತನ ಪೂಜೆ’ ಎಂದು ತಾವು ಕಾರ್ಯ ನಿವಹಿರ್ಸುವುದಾಗಿ ಅವರು ನುಡಿದರು.

ಶ್ರೀಈಶಪ್ರಿಯ ತೀರ್ಥರು ಮಾತನಾಡಿ, ತಮ್ಮ ಪರ್ಯಾಯವನ್ನು ಸಂಪ್ರದಾಯದ ಎಲ್ಲೆ ಮೀರದೇ ವಿಶಿಷ್ಟ ಹಾಗೂ ಸುಂದರವಾಗಿ ಮಾಡಲು ಮಠದ ಆನಂದ ಸಮಿತಿಯ ಮೂಲಕ ಕೆಲ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ, ಯಶ್ಪಾಲ್ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ, ವಾಸುದೇವ ಅಸ್ರಣ್ಣ, ಹರಿನಾರಾಯಣ ಅಸ್ರಣ್ಣ, ಪ್ರದೀಪ್ ಕಲ್ಕೂರ, ಹರಿಕೃಷ್ಣ ಪುನರೂರು, ಸುಪ್ರಸಾದ್ ಶೆಟ್ಟಿ, ಮಠದ ದಿವಾಣರಾದ ವೆಂಕಟರಮಣ ಮುಚ್ಚಿಂತಾಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News