ಮಹಿಳಾ ಕಲಾವಿದರಿಂದ ಕುಂಚದ ಮೂಲಕ ಹಳೆ ಮಂಗಳೂರಿನ ಅನಾವರಣ ಪೂರ್ವ ತೋರಣ

Update: 2018-12-14 12:20 GMT

ಮಂಗಳೂರು, ಡಿ.14: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಪುರಾತನ ಮಂಗಳೂರನ್ನು ವರ್ಣ ಕುಂಚದಲ್ಲಿ ಮಹಿಳಾ ಕಲಾವಿದರು ಅಭಿವ್ಯಕ್ತಗೊಳಿಸುವ ಕಲಾಶಿಬಿರ ಪೂರ್ವ ತೋರಣವನ್ನು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಇಂದು ಉದ್ಘಾಟಿಸಿದರು.

ಕಲೆ ಎಲ್ಲರನ್ನು ಒಂದು ಗೂಡಿಸುತ್ತದೆ :- ಚಿತ್ರ ಕಲೆಗೆ ಜಾತಿ,ಭಾಷೆಯ ಗಡಿಯಿಲ್ಲ ಅದು ಎಲ್ಲರನ್ನು ಒಂದು ಗೂಡಿಸುವ ಮಾಧ್ಯಮ .ಈ ಕಲಾ ಶಿಬಿರದ ಮೂಲಕ ಹಳೆ ಮಂಗಳೂರನ್ನು ಕುಂಚದ ಮೂಲಕ ಹೊಸ ತಲೆ ಮಾರಿಗೆ ಪರಿಚಯಿಸುವ ಕೆಲಸ ದ ಜೊತೆಗೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪೂರ್ವ ತೋರಣ ಮಹತ್ವದ ಶಿಬಿರವಾಗಿದೆ ಎಂದು ಕುಮಾರ್ ಶುಭ ಹಾರೈಸಿದರು.

ಹಳೆ ಮಂಗಳೂರಿನ ಕ್ಲಾಕ್ ಟವರ್ ,ಸೈಂಟ್ ಆಗ್ನೇಸ್ ಶಾಲೆ, ಹಳೆ ಜಿಲ್ಲಾಧಿಕಾರಿ ಕಚೇರಿ, ಹಳೆ ಬಂದರು ಮೀನುಗಾರಿಕಾ ಜಟ್ಟಿ ಸೇರಿದಂತೆ ಎತ್ತಿನ ಗಾಡಿ ಓಡುತ್ತಿದ್ದ ಮಂಗಳೂರಿನ ಚಿತ್ರವನ್ನು ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರಾದ ಸಪ್ನಾ ನರ್ಹೋನ್ನಾ , ವೀಣಾಮಧು ಸೂದನ,ಜಯಶ್ರೀ ಶರ್ಮ,ರಚನಾ ಸೂರಜ್,ಭಾಗೀರಥಿ ಭಂಡಾರ್‌ಕರ್,ನಿಶಾ ಬಂಗೇರಾ,ಖುರ್ಷಿದ್,ಝೀನಾ ಕುಲಾಸೋ, ಜ್ಯೋತಿ ಶೆಟ್ಟಿ, ಐಶ್ವರ್ಯ, ಧನ್ಯಾ, ಜಯಲಕ್ಷ್ಮೀ, ಅಶ್ವಿತಾ, ಧನ್ಯಶ್ರೀ,ಅಪೂರ್ವ ಶೆಟ್ಟಿ ಮೊದಲಾದವರು ಪೂರ್ವ ತೋರಣ ಕಲಾ ಶಿಬಿರದಲ್ಲಿ ಭಾಗ ವಹಿಸಿ ತಮ್ಮ ಕುಂಚದ ಮೂಲಕ ಕ್ಯಾನವಾಸ್‌ನಲ್ಲಿ ಮೂಡಿಸುತ್ತಿದ್ದಾರೆ.

ಮಂಗಳೂರು ಹಲವು ವಿಶೇಷತೆಗಳನ್ನು ಹೊಂದಿರುವ ನಗರ. ನಾನು ಮದ್ರಾಸ್ ಪ್ರಾಂತಕ್ಕೆ ಒಳಗಾಗಿದ್ದ ಕಾಲದಿಂದ ಮಂಗಳೂರನ್ನು ಕಂಡವಳು. ಮಂಗಳೂರು ಎಲ್ಲಾ ಜನರು ಒಂದಾಗಿ ಪರಸ್ಪರ ಅನ್ಯೋನ್ಯತೆಯಿಂದ ಬದುಕುವ ತಾಣವಾಗಬೇಕು ಎಂದು ಬಯಸುತ್ತೇನೆ. ಈ ನಿಟ್ಟಿನಲ್ಲಿ ಕಲಾ ಶಿಬಿರ ನಡೆಯುತ್ತಿರುವುದು ಉತ್ತಮ ಕಾರ್ಯಕ್ರಮ ಎಂದು ಪರಿಸರ ಪ್ರೇಮಿ ಪ್ರಭಾ ಕುಡ್ವಾ ಶುಭ ಹಾರೈಸಿದರು.

ಸಮಾರಂಭದಲ್ಲಿ ಹಿರಿಯ ಕಲಾವಿದರಾದ ಕೋಟಿ ಪ್ರಸಾದ್ ಆಳ್ವಾ,ಗಣೇಶ್ ಸೋಮಯಾಜಿ, ದಿನೇಶ್ ಹೊಳ್ಳ , ವಾರ್ತಾ ಇಲಾಖೆಯ ಅಧಿಕಾರಿ ಖಾದರ್ ಶಾ, ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News