ನಾಲ್ಕು ಟೊಯಿಂಗ್ ವಾಹನಕ್ಕೆ ಟೆಂಡರ್: ಡಿಸಿಪಿ ಉಮಾ ಪ್ರಶಾಂತ್

Update: 2018-12-14 12:26 GMT

ಮಂಗಳೂರು, ಡಿ.14: ನಿಯಮಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಓಡಾಡುವ, ರಸ್ತೆಯಲ್ಲಿ ಹೆಚ್ಚು ಸಮಯ ನಿಲ್ಲಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲು ನಾಲ್ಕು ಟೊಯಿಂಗ್ ವಾಹನಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲು ಟೊಯಿಂಗ್ ವಾಹನಗಳನ್ನು ತರಿಸಲಾಗುತ್ತಿದೆ. ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರು ಟೆಂಡರ್‌ಗೆ ಪ್ರತಿಕ್ರಿಯಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಾನೂನು ಪ್ರಕಾರ ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಪಕ್ಕ ಹಾಗೂ ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಂದ ದಟ್ಟಣೆ ಉಂಟಾಗುವಂತಿದ್ದರೆ ಅವುಗಳನ್ನು ಮಾಡಬಹುದಾಗಿದೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ಗಳನ್ನು ನಿಲ್ಲಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಲಾಗುತ್ತದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದರು.

ಕಟೀಲು-ಕಿನ್ನಿಗೋಳಿ ಮಾರ್ಗದ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ಗಳನ್ನು ನೀಡುವುದಿಲ್ಲ. ಟಿಕೆಟ್ ಕೇಳಿದರೆ ನಿಂದಿಸುತ್ತಾರೆ. ಟಿಕೆಟ್ ಬೇಕಿದ್ದರೆ ಬೇರೊಂದು ಬಸ್‌ನಲ್ಲಿ ಪ್ರಯಾಣಿಸುತ್ತಾರೆ ಎಂದು ಸ್ಥಳೀಯ ಮಹಿಳೆಯೊಬ್ಬರು ಕರೆ ಮಾಡಿ ದೂರು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಮಹಿಳೆಗೆ ನಿಂದಿಸಿದ ಬಸ್ ನಿರ್ವಾಹಕನ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವಂತಹ ನಿರ್ವಾಹಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಂಚಾರ ವಿಭಾಗದ ಇನ್‌ಸ್ಪೆಕ್ಟರ್ ಕಮಲಾ ಅವರಿಗೆ ಸೂಚನೆ ನೀಡಿದರು.

ಬಸ್ ನಿರ್ವಾಹಕರಿಗೆ ನೇಮ್ ಪ್ಲೇಟ್‌ಗಳನ್ನು ಧರಿಸಲು ಬಸ್ ಮಾಲಕರು ಸೂಚಿಸಿದ್ದಾರೆಯೇ ಎಂದು ದ.ಕ. ಜಿಲ್ಲಾ ಖಾಸಗಿ ಬಸ್ ಅಸೋಸಿಯೇಶನ್‌ನ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರಲ್ಲಿ ಡಿಸಿಪಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದಿಲ್‌ರಾಜ್ ಆಳ್ವ, ನೇಮ್ ಪ್ಲೇಟ್‌ಗಳನ್ನು ವಿತರಿಸಿಲ್ಲ ಎಂದು ತಿಳಿಸಿದರು.

ಫೋನ್‌ಇನ್ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ ಎ., ಎಚ್.ಶಿವಪ್ರಕಾಶ್, ಇನ್‌ಸ್ಪೆಕ್ಟರ್ ಕಮಲಾ, ಎಎಸ್ಸೈ ಕೆ.ಎಚ್. ಯೂಸುಫ್, ಹೆಡ್ ಕಾನ್‌ಸ್ಟೇಬಲ್ ಪುರುಷೋತ್ತಮ ಬಿ., ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.

ಮೀನು ವಾಹನಗಳ ಉಪಟಳ

ಜೆಪ್ಪಿನಮೊಗರು ಮತ್ತು ಜೆಪ್ಪು ಪ್ರದೇಶದಲ್ಲಿ ಮೀನು ವಾಹನಗಳ ಉಪಟಳ ಹೆಚ್ಚಿದ್ದು, ಮೀನಿನ ತ್ಯಾಜ್ಯದ ನೀರನ್ನು ರಸ್ತೆಯಲ್ಲಿಯೇ ಚೆಲ್ಲಿಕೊಂಡು ಹೋಗುತ್ತಿವೆ. ಇದರಿಂದ ವಾಹನಗಳ ತೆರಳಿದ ಸುಮಾರು 10-15 ನಿಮಿಷಗಳ ಕಾಲ ತ್ಯಾಜ್ಯದ ವಾಸನೆ ಹರಡಿರುತ್ತದೆ ಎಂದು ಸ್ಥಳೀಯರು ದೂರಿದರು. ಮಥಾಯಿ ರಸ್ತೆಯಲ್ಲಿ ಮೀನುಗಳನ್ನು ಕತ್ತರಿಸಿ ತ್ಯಾಜ್ಯವನ್ನು ರಸ್ತೆಯಲ್ಲೇ ಬಿಸಾಡಲಾಗುತ್ತಿದೆ ಎಂದು ಮತ್ತೊಬ್ಬರು ದೂರಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಉಮಾ ಪ್ರಶಾಂತ್, ಅಂತಹ ಮೀನು ವಾಹನಗಳ ವಿರುದ್ಧ ಈಗಾಗಲೇ ಪೊಲೀಸರು ಕಾರ್ಯಾಷಚರಣೆ ನಡೆಸಿ, ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಮತ್ತೊಮ್ಮೆ ಈ ಕಾರ್ಯಾಚರಣೆ ಮುಂದುವರಿಸಲಾಗುವುದು. ರಸ್ತೆಯಲ್ಲಿ ಮೀನುಗಳ ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತರ ಪ್ರಮುಖ ದೂರುಗಳು

ಕುಕ್ಕೋರಿಗುಡ್ಡೆ-ಕಂಕನಾಡಿ ಮಾರ್ಗದಲ್ಲಿ ಅಲ್ಲಲ್ಲಿ ಹಂಪ್ಸ್‌ಗಳನ್ನು ಹಾಕುವ ಬಗ್ಗೆ. ತೊಕ್ಕೊಟ್ಟು ಭಾಗದ ಬಸ್ ಬೇಗಳಿಂದ ದೂರದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿರುವುದು. ತೊಕ್ಕೊಟ್ಟು ಭಾಗದ ಬಸ್ ನಿಲ್ದಾಣ ಸಮೀಪ ರಸ್ತೆಯಲ್ಲೇ ಬೀದಿ ವ್ಯಾಪಾರ ಮಾಡುತ್ತಿರುವುದು. ಕಾರ್ನಾಡು-ಕೋಲ್ನಾಡು ಮಾರ್ಗದಲ್ಲಿ ಸಂಜೆ ವೇಳೆ ಸರ್ವಿಸ್ ಬಸ್‌ಗಳು ಬಾರದಿರುವುದು. ಕೊಟ್ಟಾರಚೌಕಿಯ ರಸ್ತೆಗಳ ಬದಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತ ವಾಹನಗಳ ನಿಲುಗಡೆಯಿಂದ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿರುವುದು. ಬೋಂದೆಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಬಗ್ಗೆ. ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ವಾಹನಗಳ ಅಡ್ಡಾದಿಡ್ಡಿ ಓಡಾಟ ತಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News