ಸರಕಾರದ ಒತ್ತಡಕ್ಕೆ ಬಗ್ಗದ ಸಂಸ್ಥೆಗಳಿಗೆ ಒತ್ತು ನೀಡಬೇಕು: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

Update: 2018-12-14 15:16 GMT

ಹೊಸದಿಲ್ಲಿ,ಡಿ.14: ಆರ್‌ ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ಅವರ ರಾಜೀನಾಮೆಯು ಮಾಜಿ ಗವರ್ನರ್ ರಘುರಾಮ ರಾಜನ್ ಸೇರಿದಂತೆ ಹಲವಾರು ಅರ್ಥಶಾಸ್ತ್ರಜ್ಞರು ದೇಶದ ಉನ್ನತ ಸಂಸ್ಥೆಗಳು ಸ್ವಾಯತ್ತತೆಯಿಂದ ಕಾರ್ಯ ನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳುವಂತೆ ಮಾಡಿದೆ.

ಸರಕಾರದ ಒತ್ತಡಗಳಿಗೆ ಬಗ್ಗದ ಸದೃಢ ಮತ್ತು ಸ್ವತಂತ್ರ ಸಂಸ್ಥೆಗಳಿಗೆ ನಾವು ಒತ್ತು ನೀಡುವ ಅಗತ್ಯವಿದೆ. ಕಾರ್ಯಾಚರಣೆ ಸ್ವಾತಂತ್ರ್ಯವನ್ನು ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಕಾರ್ಯಾಚರಣೆ ಸ್ವಾತಂತ್ರ್ಯವು ಸರಕಾರದ ಖಡಕ್ ಆದೇಶಗಳಿದ್ದರೂ ಅದಕ್ಕೆ ಪಕ್ಕಾಗದೆ ತನ್ನ ಕಾರ್ಯವನ್ನು ನಿರ್ವಹಿಸುವ ಸಂಸ್ಥೆಯ ಸಾಮರ್ಥ್ಯವಾಗಿದೆ ಎಂದು ರಘುರಾಮ ರಾಜನ್ ಹೇಳಿದ್ದಾರೆ.

ಪಟೇಲ್ ಅವರ ರಾಜೀನಾಮೆ ಮತ್ತು ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್ ಅವರ ನೇಮಕವು ಸರಕಾರದ ಸೂಚನೆಯ ಮೇರೆಗೆ ನಡೆದುಕೊಳ್ಳುವಂತೆ ಆರ್‌ಬಿಐ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಇದು ಸುದೀರ್ಘಾವಧಿಯಲ್ಲಿ ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ ಎಂಬ ಆತಂಕವನ್ನು ಹೆಚ್ಚಿಸಿದೆ. ಚುನಾವಣಾ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಖರ್ಚು ಮತ್ತು ತನ್ನ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಿಧಿಯನ್ನು ಹೆಚ್ಚಿಸಲು ಸರಕಾರವು ಬಯಸಿರುವುದರಿಂದ ತನ್ನ ಸುಮಾರು 50 ಶತಕೋಟಿ ಡಾ.ಹೆಚ್ಚುವರಿ ಬಂಡವಾಳ ಮೀಸಲನ್ನು ಸರಕಾರಕ್ಕೆ ಹಸ್ತಾಂತರಿಸುವಂತೆ ಆರ್‌ಬಿಐ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ಆರ್‌ಬಿಐ ಅತಿಯಾದ ಬಂಡವಾಳವನ್ನು ಹೊಂದಿದೆ ಎಂಬ ಸರಕಾರದ ವಾದವನ್ನು ಅರ್ಥಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಿಲ್ಲ. ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಆರ್‌ಬಿಐ ಅತಿಯಾದ ಬಂಡವಾಳವನ್ನು ಹೊಂದಿಲ್ಲ. ವಾಸ್ತವದಲ್ಲಿ ಅದಕ್ಕೆ ಬಂಡವಾಳದ ಕೊರತೆಯಿದೆ ಎಂದು ಆರ್‌ಬಿಐ ಪ್ರವರ್ತಿತ ಸೆಂಟರ್ ಫಾರ್ ಅಡ್ವಾನ್ಸ್ ಡ್ ಫೈನಾನ್ಶಿಯಲ್ ರೀಸರ್ಚ್ ಲರ್ನಿಂಗ್‌ನ ನಿರ್ದೇಶಕ ಡಾ.ಅಮರ್ತ್ಯ ಲಾಹಿರಿ ಹೇಳಿದರು.

ಮಾಜಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹಾಗು ವಿವಾದಾತ್ಮಕ ನೋಟು ನಿಷೇಧದ ಹಿಂದಿದ್ದ ಅತ್ಯುನ್ನತ ಅಧಿಕಾರಿ ದಾಸ್ ಅವರನ್ನು ಸಾಕಷ್ಟು ರಾಜಕೀಯ ಅಥವಾ ಆರ್ಥಿಕ ಸಮರ್ಥನೆಯಿಲ್ಲದಿದ್ದರೂ ಆರ್‌ಬಿಐ ಗನರ್ವರ್ ಆಗಿ ಪದೋನ್ನತಿಗೊಳಿಸಿದ್ದನ್ನೂ ತಜ್ಞರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News