ನೋಟು ನಿಷೇಧ ನಿರ್ಧಾರದ ಆರ್ಥಿಕ ಪರಿಣಾಮದ ಅಧ್ಯಯನ ಮಾಡಿಲ್ಲ ಎಂದ ಕೇಂದ್ರ ಸರಕಾರ

Update: 2018-12-14 15:25 GMT

ಹೊಸದಿಲ್ಲಿ,ಡಿ.14: ನೋಟು ನಿಷೇಧದಿಂದ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮದ ಅಧ್ಯಯನ ಅಥವಾ ಮೌಲ್ಯಮಾಪನವನ್ನು ತಾನು ಮಾಡಿಲ್ಲ ಎಂದು ಕೇಂದ್ರ ಸರಕಾರವು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿತು.

ನೋಟು ನಿಷೇಧದ ನಂತರದ ಪರಿಣಾಮಗಳ ಕುರಿತು ಪ್ರಶ್ನೆಯೊಂದಕ್ಕೆ ಸದನದಲ್ಲಿ ಉತ್ತರಿಸಿದ ಸಹಾಯಕ ವಿತ್ತ ಸಚಿವ ಪಿ.ರಾಧಾಕೃಷ್ಣನ್ ಅವರು ಈ ವಿಷಯವನ್ನು ತಿಳಿಸಿದರು.

2016,ನ.8ರಂದು ರಾತ್ರಿ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು,ಅಂದು ಮಧ್ಯರಾತ್ರಿಯಿಂದ 1,000 ಮತ್ತು 5,00 ರೂ.ನೋಟುಗಳ ನಿಷೇಧವನ್ನು ಪ್ರಕಟಿಸಿದ್ದರು. ಈ ಕ್ರಮವು ಕಪ್ಪುಹಣ ಮತ್ತು ನಕಲಿ ನೋಟುಗಳ ಹಾವಳಿಯನ್ನು ಅಂತ್ಯಗೊಳಿಸಲಿದೆ ಎಂದು ಅವರು ಹೇಳಿದ್ದರು.

 ಆದರೆ,ನೋಟುಗಳ ನಿಷೇಧಕ್ಕೆ ಮುನ್ನ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.99.3ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿವೆ ಎಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ತನ್ನ ವರದಿಯಲ್ಲಿ ತಿಳಿಸಿದ್ದ ಆರ್‌ಬಿಐ, ಕಪ್ಪುಹಣವೆಂದು ಭಾವಿಸಲಾಗಿದ್ದ ಬೃಹತ್ ಮೊತ್ತವೂ ಮುಖ್ಯವಾಹಿನಿಯ ಆರ್ಥಿಕತೆಯಲ್ಲಿ ಮರಳಿ ಸೇರಿಕೊಂಡಿರಬಹುದು ಎಂಬ ಸುಳಿವನ್ನು ನೀಡಿತ್ತು. ಅಲ್ಲದೆ ನೋಟು ನಿಷೇಧ ನಿರ್ಧಾರದಿಂದಾಗಿ 2017ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.5.7ಕ್ಕೆ ಕುಸಿದಿದೆ ಎಂದೂ ದೂರಲಾಗಿತ್ತು.

ನೋಟು ನಿಷೇಧ ನಿರ್ಧಾರಕ್ಕೆ ತನ್ನ ಅನುಮತಿಯನ್ನು ನೀಡುವಾಗ ಆರ್‌ಬಿಐ ಕಪ್ಪುಹಣ ಮತ್ತು ನಕಲಿ ನೋಟುಗಳ ಹಾವಳಿ ಅಂತ್ಯಗೊಳ್ಳುತ್ತದೆ ಎಂಬ ಈ ಕ್ರಮದ ಎರಡು ಮುಖ್ಯ ಸಮರ್ಥನೆಗಳನ್ನು ತಿರಸ್ಕರಿಸಿತ್ತು ಎಂಬ ವರದಿ ಯೊಂದನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಲೋಕಸಭೆಯಲ್ಲಿ ನಿರಾಕರಿಸಿದರು. ಕಪ್ಪುಹಣ ಮತ್ತು ನಕಲಿ ನೋಟುಗಳ ಮೇಲೆ ಪರಿಣಾಮ ಮಹತ್ವದ್ದಾಗಿರುವುದಿಲ್ಲ ಎಂದು ಆರ್‌ಬಿಐ ಸರಕಾರಕ್ಕೆ ತಿಳಿಸಿತ್ತು ಎಂದು ನವೆಂಬರ್‌ನಲ್ಲಿ ಆಂಗ್ಲ ದೈನಿಕವೊಂದು ತನ್ನ ವರದಿಯಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News