ತಮಿಳುನಾಡು:ಪಕ್ಷ ತೊರೆದು ಡಿಎಂಕೆಗೆ ಸೇರ್ಪಡೆಗೊಂಡ ದಿನಕರನ್ ಬೆಂಬಲಿಗ

Update: 2018-12-14 15:28 GMT

ಚೆನ್ನೈ,ಡಿ.14: ಬಂಡುಕೋರ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರ ಬಣವನ್ನು ಸೇರಿದ್ದಕ್ಕಾಗಿ ಕಳೆದ ವರ್ಷ ಅನರ್ಹಗೊಂಡಿದ್ದ 18 ತಮಿಳುನಾಡು ಶಾಸಕರಲ್ಲೋರ್ವರಾಗಿರುವ ವಿ.ಸೆಂಥಿಲ್ ಬಾಲಾಜಿ ಅವರು ಶುಕ್ರವಾರ ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.

ಶಾಸಕರನ್ನು ಅನರ್ಹಗೊಳಿಸಿದ್ದ ವಿಧಾನಸಭಾ ಸ್ಪೀಕರ್ ಪಿ.ಧನಪಾಲ್ ಅವರ ಕ್ರಮವನ್ನು ಬಳಿಕ ಮದ್ರಾಸ್ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ದಿನಕರನ್ ಅವರು ಈ ವರ್ಷದ ಮಾರ್ಚ್‌ನಲ್ಲಿ ತನ್ನದೇ ಆದ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷವನ್ನು ಹುಟ್ಟುಹಾಕಿದ್ದರು.

ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರುವ ದಿನಕರನ್ ನಿರ್ಧಾರದಿಂದ 18 ಅನರ್ಹ ಶಾಸಕರ ಪೈಕಿ ಕೆಲವರು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.

ಬಾಲಾಜಿ ನಿರ್ಗಮನಕ್ಕೆ ಪ್ರತಿಕ್ರಿಯಿಸಿದ ದಿನಕರನ್ ಅವರು,ತಾನು ಯಾರನ್ನೂ ಕಟ್ಟಿಹಾಕುವುದು ಸಾಧ್ಯವಿಲ್ಲ. ಅದು ಅವರ ನಿರ್ಧಾರವಾಗಿದೆ,ಅವರು ಎಲ್ಲಿ ಹೋದರೂ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು. ಬಾಲಾಜಿ ಅವರು 2011-2016ರ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸರಕಾರದಲ್ಲಿ ಸಚಿವರಾಗಿದ್ದರು. ದಿನಕರನ್ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಾಲಾಜಿ ಅವರ ಆಪ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News