ಮ್ಯಾನ್ಮಾರ್‌ನಲ್ಲಿ ನಡೆದ್ದದು ‘ರೊಹಿಂಗ್ಯಾ ಜನಾಂಗೀಯ ಹತ್ಯೆ’: ಅಮೆರಿಕ ಸಂಸತ್ತಿನಲ್ಲಿ ಬಹುಮತದಿಂದ ನಿರ್ಣಯ ಅಂಗೀಕಾರ

Update: 2018-12-14 15:40 GMT

ವಾಶಿಂಗ್ಟನ್, ಡಿ. 14: ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ನಿಂದ ಹೊರದಬ್ಬಿರುವುದನ್ನು ‘ಜನಾಂಗೀಯ ಹತ್ಯೆ’ ಎಂಬುದಾಗಿ ಬಣ್ಣಿಸುವ ನಿರ್ಣಯವೊಂದನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಭಾರೀ ಬಹುಮತದಿಂದ ಗುರುವಾರ ಅಂಗೀಕರಿಸಿದೆ.

ಮ್ಯಾನ್ಮಾರ್ ಸೇನೆಯು ‘ಮಾನವತೆ ವಿರುದ್ಧದ ಅಪರಾಧ’ ಮಾಡಿದೆ ಎಂಬುದಾಗಿಯೂ ಅಮೆರಿಕ ಕಾಂಗ್ರೆಸ್‌ನ ಕೆಲ ಸದನ ಆರೋಪಿಸಿತು ಹಾಗೂ ಈ ದೌರ್ಜನ್ಯದ ಬಗ್ಗೆ ವರದಿ ಮಾಡಿದ ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಕರೆ ನೀಡಿತು.

ನಿರ್ಣಯದ ಪರವಾಗಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್- ಎರಡೂ ಪಕ್ಷಗಳ 394 ಸಂಸದರು ಮತ ಹಾಕಿದರು. ರಿಪಬ್ಲಿಕನ್ ಪಕ್ಷದ ಏಕೈಕ ಸಂಸದ ಮಾತ್ರ ನಿರ್ಣಯದ ವಿರುದ್ಧವಾಗಿ ಮತ ಹಾಕಿದರು.

ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರನ್ನು ಹೊರದಬ್ಬಿದ ಮ್ಯಾನ್ಮಾರ್ ಸೇನೆಯ ಕಾರ್ಯಾಚರಣೆಯು ‘ಜನಾಂಗೀಯ ಹತ್ಯೆ’ಯಾಗಿದೆ ಎಂಬುದಾಗಿ ವಿಶ್ವಸಂಸ್ಥೆಯು ಈಗಾಗಲೇ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್ ಸೇನೆಯು 2017ರಲ್ಲಿ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ದಮನ ಕಾರ್ಯಾಚರಣೆಯು, ಅಂತರ್‌ರಾಷ್ಟ್ರೀಯ ಕಾನೂನಿನಡಿಯಲ್ಲಿ ಮಾನವತೆಯ ವಿರುದ್ಧದ ಅಪರಾಧವಾಗುತ್ತದೆಯೇ, ಜನಾಂಗೀಯ ಹತ್ಯೆಯಾಗುತ್ತದೆಯೇ ಅಥವಾ ಇತರ ಮಾದರಿಗಳ ಅಪರಾಧವಾಗುತ್ತದೆಯೇ ಎಂಬುದನ್ನು ಲಭ್ಯವಿರುವ ಪುರಾವೆಗಳ ಆಧಾರದಲ್ಲಿ ನಿರ್ಧರಿಸುವಂತೆ ಕಾಂಗ್ರೆಸ್‌ನ ಸದಸ್ಯರು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊಗೆ ಕರೆ ನೀಡಿದರು.

2017 ಆಗಸ್ಟ್‌ನಲ್ಲಿ ನಡೆದ ಸಂಘರ್ಷದ ಬಳಿಕ ಸುಮಾರು 7.5 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News